Thursday 31 January 2013

ಬೆತ್ತಲೆ ಜೀವ...!!!


ನಾನು ಎಲ್ಲಿ ಹುಟ್ಟಿದೆನೋ, ಯಾರು ಹುಟ್ಟಿಸಿದರೋ, ಯಾವಾಗ ಈ ಭೂಮಿಗೆ ಬಂದೆನೋ; ದೇವರೇ, ನನಗೆ ಇವತ್ತೇ ಸಾವನ್ನು ಕೊಟ್ಟರೂ ಸರಿಯೇ, ಆದರೆ, ನನ್ನೀ ದ್ವಂದ್ವಗಳಿಗೆ ಒಮ್ಮೆ ಉತ್ತರಿಸಿಬಿಡು. ನನ್ನೆಲ್ಲ ಈ ಹೋರಾಟಕೆ ತಿಲಾಂಜಲಿ ಹೇಳಿ ನಿನ್ನತ್ತ ತೂರಿಕೊಂಡು ಬಂದು ಬಿಡುತ್ತೇನೆ..!! ತನಗೆ ತಾನೇ “ಪೋಳಿರಾಜ” ಎಂಬ ಹೆಸರಿಟ್ಟುಕೊಂಡು ಊರಿನವರಿಂದ ಸಾವಿರಾರು ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ಪೋಳಿರಾಜು, ಊರ ಹೊರಗಿನ ಗ್ರಾಮದೇವತೆಯ ಕಟ್ಟೆಯ ಮೇಲೆ ಕುಳಿತು ಗ್ರಾಮದೇವಿಗೆ ನೋಡುತ್ತ ಪ್ರಾರ್ಥಿಸುತ್ತಿದ್ದ.ಒಮ್ಮೊಮ್ಮೆ ಅತೀವ ಆತ್ಮಾವಲೋಕನದೊಳು ಹೊಕ್ಕು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಹುಚ್ಚು- ಹುಚ್ಚಾಗಿ ವರ್ತಿಸಿದರೆ; ಮಗದೊಮ್ಮೆ ತೀವ್ರ ಜಾಣತನದ ಪ್ರದರ್ಶನವನ್ನು ತನ್ನೊಳಗೆ ತೋರುತ್ತಿದ್ದ. ತನ್ನ ಮನಸಲ್ಲಿನ ಆ ಉದ್ವೇಗದ ಭಾವದಲೆಗಳಿಗೆ ತತ್ತರಿಸಿ ಶೂನ್ಯಭಾವದಲ್ಲಿ ತನ್ನ ವಿಚಾರ ಲಹರಿಯ ಬಂಡಿಯಲ್ಲಿ ಕುಳಿತು ಯೋಚನಾ ಪರಿಧಿಯಲಿ ಸುತ್ತುತ್ತಿದ್ದ. ಕೆಲವೊಮ್ಮೆ ಬದುಕಿಗಾಗಿ ಹಾತೊರೆಯುತ್ತಿದ್ದ. ದಿನದ ಮುಕ್ಕಾಲು ಭಾಗ ಇಂಥವೇ ವಿಚಾರಗಳಿಗೆ ಮನಸಲಿ ಜಾಗ ನೀಡಿ ತಲೆಕೆಳಗಾಗಿಸಿಕೊಂಡು ಊರಿನ ಹೊರ ಹಾದಿ ಬೀದಿಯಲ್ಲೆಲ್ಲ ಅಲೆಯುತ್ತಿದ್ದ. ಅವನ ಓದು ಉದ್ಯೋಗ ಗಗನ ಕುಸುಮವಾಗಿದ್ದರೂ ತತ್ವಯುಕ್ತ ತಾರ್ಕಿಕ ತುಲನೆ ಮಾತ್ರ ಮೇರೆ ಮೀರಿಸುವಂತ್ತಿತ್ತು. ಊರಿಗೆಲ್ಲ ಬೇಡವಾದ ಪಿಂಡದಂತೆ ತೋರಿದ್ದ ಈತ, ತನ್ನೊಳಗೆ ತನ್ನವನಾದಂತಹ ಒಬ್ಬ ವಿಚಾರವಂತ ಮರಿ ಪೋಳಿರಾಜನನ್ನು ಬೆಳೆಸಿದ್ದ. ಅವನನ್ನು ಪುಟ್ಟ ಹಸುಕಂದನಂತೆ ಕೂಡಾ ಪೋಷಿಸುತ್ತಿದ್ದ. ಇಂದಲ್ಲ ನಾಳೆ ತನ್ನ ಹಣೆ ಬರಹ ಬದಲಾದಿತೇ ಎಂಬ ದೃಢ ನಂಬಿಕೆಯನ್ನು ಹೊಂದಿರಲಿಲ್ಲವಾದರೂ. ಹೃದಯದ ಮೂಲೆಯಲ್ಲಿ ಮಾತ್ರ ಒಂದು ಒಳ್ಳೆಯತನ ಎಂಬ ಜೀವ ಉಸಿರಾಡಿಸಿಕೊಂಡಿದ್ದ.

ಜೀವನ ಒಂದೇ ಆದರು ಅದನ್ನು ನೀಗಿಸಿಕೊಂಡು ಹೋಗಲು ಎಷ್ಟು ವಿಧದ ಬಣ್ಣ, ವೇಷ, ಅಭಿನಯ. ಒಂದೇ ಎರಡೇ ನಮಗೆ ಬುದ್ಧಿ ಬೆಳೆದು ಪ್ರಬುದ್ಧಕೆ ಬಂದರೆ ಸಾಕು ನಾವು ನಮ್ಮ ಮೇಲಿನ ಸ್ವತಂತ್ರವನ್ನು ಕಳೆದುಕೊಂಡು ಜೀವನ ಎಳೆದು ಕೊಂಡು ಹೋದಂತೆಲ್ಲ ನಮ್ಮ ಪ್ರಯಾಣವನ್ನು ಬೆಳೆಸಿಬಿಡುತ್ತೇವೆ. ಪಯಣದ ನಡುವೆ ಏಳು-ಬೀಳು, ನೋವು- ನಲಿವು, ನಿಶ್ಚಿತತೆ- ಅನಿಶ್ಚಿತತೆ ಎಂಬಂಥ ಈ ವಿರುದ್ಧ ಪದಗಳ ಉದ್ದನೆಯ ಪಟ್ಟಿ ಹನುಮಂತನ ಬಾಲದಂತೆ ಬೆಳೆದು ಬಿಡುತ್ತದೆ.ಇವುಗಳಲ್ಲಿ ನಮ್ಮ ಜೀವನದ ಬಂಡಿ ಸದ್ದು ಮಾಡುತ್ತಲೇ ಮುಂದುವರೆಯುತ್ತಿರುತ್ತದೆ. ಆದರೂ, ಈ ಹುಟ್ಟು ಮತ್ತು ಆ ಮುಂದೆ ಭೂತದಂತೆ ಅವಿತು ಕುಳಿತ ಸಾವಿನ ನಡುವಿನ ನೆಮ್ಮದಿಯ ಬದುಕಿಗಾಗಿ ಈ ನಿರಂತರ ಹೋರಾಟ ಮತ್ತು ನೆಗೆದಾಟ ಅವಿರತವಾಗಿ ಕಣ್ಣಿಗೆ ಕಾಣದೇ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುವ ಗಾಳಿಯಂತೆ ನಮ್ಮಲ್ಲಿ ಇಂಬು ಗೊಂಡಿರುತ್ತವೆ. ಇಂಥ ಆಟಗಳಲಿ ಒಮ್ಮೊಮ್ಮೆ ನಾವು ಧೀರ ಹುದ್ದರಿಗಳಾದರೂ ಮಗದೊಮ್ಮೆ ಮಾತ್ರ ಸೂತ್ರದ ಬೊಂಬೆಗಳು. ಸುಂದರ ಬೆಳಗುಗಳನ್ನು ಕನವರಿಸುತ್ತ ಸಾಗುತ್ತಿರುತ್ತೇವೆ. ಇಂಥ ಪ್ರಯಾಣದಲ್ಲಿ ಇಲ್ಲೊಬ್ಬ ಅಂದರೆ , ಅವನಿಗೆ ನೀವು ಧೀಮಂತ ನಾಯಕ ಅನ್ನುತ್ತೀರೊ ಅಥವಾ ದುರಂತ ಖಳನಾಯಕ ಅನ್ನುತ್ತಿರೋ ಅವನ ಈ ಕಥೆ ಓದಿದ ಮೇಲೆ ನೀವೆ ನಿರ್ಧರಿಸಿ. ನಾನು ಕಥೆ ಎಂದಮೇಲೆ ನೀವು ಅವನನ್ನು ಯಾಕೆ ಹೀಗೆ ಕರೆಯಬೇಕು ಎಷ್ಟಾದರು ಕತೆಯಲ್ಲವೇ ಓದಿ ಸುಮ್ಮನಾದರಾಯ್ತು ಎನ್ನಬಹುದು ಆದರೆ ನೆನಪಿರಲಿ! ಕೆಲವರ ಜೀವನವು ಒಂದು ಕಟ್ಟು ಕತೆಯನ್ನು ಮೀರಿಸುವಂತ ಆಕಸ್ಮಿಕ ಮತ್ತು ಅನಿಷ್ಟತೆಗಳನ್ನು ಒಳಗೊಂಡಿರುತ್ತದೆ. ಅಂಥ ಕಥಾನಕವೇ ಈ ಬೆತ್ತಲೆ ಜೀವ.

ಅದು, ಶುಭ ಶಿವರಾತ್ರಿಯ ದಿನ. ಊರಲೆಲ್ಲ ಶಿವ ಭಜನೆ, ಪೂಜೆ ಅಲಂಕಾರಗಳು ಮೇಳೈಸಿ, ಆ ಕುಗ್ರಾಮಕ್ಕೊಂದು ಅಗ್ರ ಕಳೆಯನ್ನು ತುಂಬಿದ್ದವು. ಸಂಜೆ ಹೊತ್ತು ಮುಳುಗಿ ಸುತ್ತಲೆಲ್ಲ ಕತ್ತಲು ಆವರಿಸುತ್ತಿದ್ದಂತೆ, ಊರಲ್ಲಿ ಅಲ್ಲಲ್ಲಿ ಹಬ್ಬದ ದೀಪಗಳು ಪ್ರಜ್ವಲಿಸಲತ್ತಿದವು. ಯಾವಗಲೂ ಶೂನ್ಯಭಾವದಿಂದ ಅಂತರ್ಮುಖಿಯಾಗಿ ಕಾಲ ಕಳೆಯುತ್ತಿದ್ದ ಇವನಿಗೆ, ಆವತ್ತು ಈ ಅವನ ಮನೆಯಾಗಿಹೋಗಿದ್ದ ದೇವರ ಗುಡಿಯ ಪೋಳಿಯನ್ನು ತೊರೆದು ಊರಸೇರಬೇಕು ಎನಿಸಿತು. ಇನ್ನು ಮುಂದೆ ದಿನದ ಇಪ್ಪತ್ತು ನಾಲ್ಕು ಗಂಟೆ ಊರಲ್ಲಿಯೇ ಬದುಕಬೇಕೆಂದು ನಿರ್ಧರಿಸಿದ. ದಿನವೆಲ್ಲ ಕಾಡು ಗದ್ದೆ ಅಲೆದು ಗಡ್ಡೆ ಗೆಣಸು ಗದ್ದೆಯಲ್ಲಿ ಸಿಕ್ಕುವಂತ ಹಣ್ಣು ತರಕಾರಿ ತಿಂದು ಬದುಕುತ್ತಿದ್ದವನು  ಆವತ್ತು ಸಂಜೆ ಊರಕಡೆಗೆ ಹೆಜ್ಜೆ ಹಾಕಿದ. ಸತ್ತ ಮನುಷ್ಯನ ಹೆಣಕ್ಕೆ ಗೋರಿಯರೆಗೂ ತಿರುಪಾಗಿ ತೊಡಿಸಿಕೊಂಡ ಬಂದು ಹೂತಾಕುವ ಮೊದಲು ಆ ಹೆಣದಿಂದ ಕಳೆದು ಬಿಸಾಕುವ ಬಟ್ಟೆಯನ್ನು ಹೊತ್ತು ತಂದು ಪೋಳಿರಾಜನು ತೊಟ್ಟುಕೊಳ್ಳುತ್ತಿದ್ದ. ಈ ಒಂದು ಕೆಲಸ ಅವನಿಗೆ ಬುದ್ಧಿಬೆಳೆದಾಗಿನಿಂದಲೂ ಮುಂದುವರೆಸಿಕೊಂಡು ಬಂದಿದ್ದ. ಇದನ್ನು ಅರಿತಿದ್ದ ಜನ ಇವನು ಏನಾದರು ಊರೊಳಗೆ ಬಂದರೆ ಗೋರಿಯಿಂದ ಹೆಣವೇ ಎದ್ದು ಬಂದಿದೆ ಏನೋ ಎನ್ನುವಂತೆ ಕಾಣುತ್ತಿದ್ದರು. ಈ ಒಂದು ಕಾರಣಕ್ಕೆ ಸಮುದಾಯದಿಂದ ತುಸು ಹೊರಗೆ ತನ್ನ ಬದುಕು ಬಂಡಿಯನು ಒಬ್ಬಂಟಿಯಾಗಿ ಹೂಡಿದ್ದ.

ಒಮ್ಮೆ ಬಟ್ಟೆ ಹಾಕಿದನೆಂದರೆ ಮುಂದೆ ಮತ್ತೊಬ್ಬ ಊರಲ್ಲಿ ಸತ್ತು ಅವನ ಹೆಣದಿಂದ ಬಟ್ಟೆಗಳು ಸಿಗುವವರೆಗೂ ಅವನು ಹಾಕಿದ ಬಟ್ಟೆಯನ್ನು ತೆಗೆಯುತ್ತಿರಲಿಲ್ಲ. ಮೊದಲೇ ಹೇಳಿ ಕೇಳಿ ಅದೊಂದು ಕಾಡಿನ ನಡುವೆ ಇದ್ದಂತಹ ಸಣ್ಣ ಕುಗ್ರಾಮ ಅಲ್ಲಿ ಹುಟ್ಟಿಸಾಯುವವರಿಗೂ ಸಹ ಬರ. ಇಂತ ಹಳ್ಳಿಯಲಿ ಈ ಹಿಂದೆ ಒಂದು ತಿಂಗಳ ಮೊದಲು ತೀರಿಹೋಗಿದ್ದ ಊರಿನ ಕುಲಕರ್ಣಿ (ಗುಮಾಸ್ತ)ನ ಹೆಣಕ್ಕೆ ಹಾಕಿದಂತಹ ಬಟ್ಟೆಯನು ಧರಿಸಿ ಊರಿಗೆ ಬಂದ. ಇನ್ನೇನು ಊರ ಅಗಸಿ ಅಣತಿ ದೂರದಲ್ಲಿತ್ತು ಹಿಂದೆ ಕೈಗಳನು ಕಟ್ಟಿ ಗೇನುದ್ದ ಗಡ್ಡ ಮತ್ತು ಮೊಳ ಉದ್ದ ತಲೆಯಲಿ ಜಡೆಯನ್ನು ಬಿಟ್ಟುಕೊಂಡು ತಲೆಕೆಳಗಾಗಿಸಿಕೊಂದು ಹೋಗುತ್ತಿದ್ದ. ಥಟ್ಟನೆ ಅವನ ಕಣ್ಣಿಗೆ ಬಿದ್ದ ರಸ್ತೆ ಬದಿಯಲ್ಲಿ ಬಿದ್ದಂತಹ ಶಿಂದಿ ಹೆಡಿಗೆಯನ್ನು (ಬುಟ್ಟಿ) ಕೈಗೆತ್ತಿಕ್ಕೊಂಡು  ಅಲ್ಲಿಲ್ಲಿ ಬಿದ್ದಂತಹ ಜಾನುವಾರಗಳ ಸೆಗಣಿಯನ್ನು ಆ ಬುಟ್ಟಿಯೊಳಗೆ ಹಾಕಿಕೊಂಡು ಮುಂದೆ ಹೊರಟ. ಒಂದೆರಡು ಪರ್ಲಾಂಗ್ ದೂರ ಕ್ರಮಿಸುವದರಲ್ಲಿ ಆ ಬುಟ್ಟಿ ಸೆಗಣಿಯಿಂದ ತುಂಬಿ ಹೊಯ್ತು. ರಸ್ತೆ ಬದಿಗೆ ಅಂಟಿಕೊಂಡಂತಿದ್ದ ಊರಿನ ಕೆಳಗೇರಿ ಹನುಮಂತಪ್ಪನ ಹೊಲದ ಪೈರಿಗೆ ಆ ಸೆಗಣಿಯಲ್ಲವನ್ನು ಹಾಕಿ ಮುಂದೆ ಸಾಗಿದ. ಈ ಸೆಗಣಿ ಹಿಡಿದು ಕಂಡವರ ಹೊಲಗಳಿಗೆ ಸುರಿಯುವ ಹವ್ಯಾಸ ಅವನಿಗೆ ತುಂಬಾ ವರ್ಷದಿಂದಲೇ ಅಂಟಿಕೊಂಡಂತ ಚಟವಾಗಿತ್ತು. ತಾನು ಹೆಕ್ಕಿ ತಿನ್ನುತ್ತಲಿದ್ದ ಕಂಡವರ ಗದ್ದೆಯ ಹಣ್ಣು ತರಕಾರಿಗಳಿಗೆ ತನ್ನ ಋಣವನ್ನು ಬಹುಶಃ ಈ ರೀತಿಯಾಗಿ ಅರ್ಪಿಸುತ್ತಿದ್ದನೇನೋ. ಆಮೇಲೆ ಗದ್ದೆಯ ಮೇರೆಯಲಿ ಸಣ್ಣಗೆ ಹರಿಯುತ್ತಿದ್ದ ಜವುಳು ನೀರಿನಲ್ಲಿ ತನ್ನ ಕೈಗಳನ್ನು ತೊಳೆದುಕೊಂಡು ಒಂದೆರಡು ಬೊಗಸೆ ನೀರನ್ನು ಕುಡಿದು ಮುಂದೆ ಸಾಗಿದ. ಊರ ಅಗಸಿ ಬಾಗಿಲಿಗೆ ಬಂದು ತಲುಪಿದ. ತನ್ನ ಮುಖವನ್ನು ಸ್ವಲ್ಪ ಮೇಲಕ್ಕೆ ನಿಗುರಿಸಿ ಊರೊಳಗೆ ದೃಷ್ಟಿ ಹರಿಸಿದ. ಊರಿನ ಹಾದಿ-ಬೀದಿಗಳಲಿ ಹೆಂಗಳೆಯರು ಹಾಕಿದ ರಂಗೋಲಿ, ತಳಿರು ತೋರಣ, ದೀಪದಲಂಕಾರ ಅವನಿಗೆ ಮುದನೀಡಿತು. ಮನಸ್ಸಲ್ಲಿಗೆ ತನಗೇ ಏನು ಅರ್ಥವಾಗದಂತೆ ಏನನ್ನೊ ಗುನುಗಿ ಒಮ್ಮೊಮ್ಮೆ ನಸುನಗುತ್ತ ಮುಂದೆ ಸಾಗಿದ.

ಪೋಳಿರಾಜು ಸಣ್ಣಗೆ ಮಂದ ಹೆಜ್ಜೆಯನ್ನು ಇಡುತ್ತ ಊರ ಅಗಸಿ ಬಾಗಿಲನ್ನು ತಲುಪುತ್ತಿದ್ದಂತೆ ಕೈಯಲ್ಲಿ ಚೊಂಬು ಹಿಡಿದುಕೊಂಡು ಬಹಿರ್ದೆಶೆಗೆಂದು ಹೋಗಿತ್ತಿದ್ದ ಊರಿನ ಏರು ವಯಸ್ಸಿನ ರಂಗಮ್ಮ ಇವನನ್ನು ನೋಡಿ ‘’ಲೋ ಪೋಳಿ ಇವತ್ಯಾಕೋ ಊರವೊಳಗೆ ಬರ್ತಾ ಇದೀಯಾ ಪಾಪಿ, ಮೊದಲೇ ಹೇಳಿ ಕೇಳಿ ಇವತ್ತು ಹಬ್ಬದ ದಿನ ಹಾಳಾಗಿ ಅಲ್ಲೆ ಗುಡಿ ಪೋಳಿಯಲ್ಲಿ ಬಿದ್ದಿರಬಾರದೆ’’ಎಂದಳು. ಒಂದು ಕ್ಷಣ ರಂಗಜ್ಜಿಯ ಮಾತ ಕೇಳಿಸಿದ್ದರು ಕೇಳಸದೆಯೇ ಇದ್ದವರಂತೆ ಪೋಳಿ ಪ್ರತಿಕ್ರಿಯಿಸಿದನು. ಮತ್ತೊಮ್ಮೆ ಅದೇ ಮಾತಿಗಳನ್ನು ರಂಗಜ್ಜಿ ಜೋರಾಗಿ ಉಸುರಿದಳು. ಇತ್ತ ಸ್ವಲ್ಪ ಕುಪಿತನಾದ ಪೋಳಿ. “ಯಾಕೆ ನಾನು ಮನುಷ್ಯ ಅಲ್ವೇನು”? ಎಂದ. ರಂಗಮ್ಮ ; “ಪಾಪಿ ನೀನು ಮನುಷ್ಯ ಅಂತ ಈ ಊರ ಒಪ್ಪಿಕೊಂಡಿದ್ದರೆ ನಿನಗೆ ಈ ಸ್ಥಿತಿ ಬರ್ತಾ ಇರ್ಲಿಲ್ಲ. ನೀನು ಸತ್ತ ಮನುಷ್ಯರ ಬಟ್ಟೆ ತೊಟ್ಟುಕೊಂಡು ಓಡಾಡುತ್ತಿರುವ ಜೀವಂತ ಹೆಣ”. ಸುಮ್ಮನೆ ಯಾಕೆ ಊರರವ ಬಾಯಿಗೆ ಬಿಸಿ ಅಲ್ವ ಆಗತೀಯಾ. ಹಾಳಾಗಿ ಹೋಗು..!! ಮದುವೆ ಆಗೋ ಸನ್ಯಾಸಿ ಅಂದ್ರೆ ನೀನೆ ನನ್ನ ಹೆಂಡತಿ ಅಂದ್ರಂತೆ ಹಾಗಾಯ್ತಿ ನಿನ್ನ ಕತೆ. ಎಂದು ಮನಸ್ಸಲಿ ಪಾಪಿ ಮುಂಡೇದು ಯಾವಾಗ ಮನುಷ್ಯನಾಗಿ ಬದುಕುತ್ತೋ ಏನೋ…..ಶನಿ ಹೆಗಲೇರಿಸಿಕೊಂಡು ಸುತ್ತುತ್ತಾ ಇದೆ. ಇರುವಷ್ಟು ದಿನ ಯಕಶ್ಚಿತ ದರಿದ್ರ ಮನುಷ್ಯ ಎಂದೆನಿಸಿಕೊಂಡಾದರು ಬದುಕಬಾರದೆ. ಒಂದು ದೃಷ್ಟಿಯಿಂದ ನೋಡಿದರೆ ಪಾಪ ಅಯ್ಯೋ ಎನಿಸುತ್ತೆ. ಎಲ್ಲಿ ಹುಟ್ತೋ ,ಯಾರ ಹೆತ್ತರೋ, ಯಾರಿಗೆ ಗೊತ್ತು ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಾ ಇದೆ ಎಂದು ಗೊಣಗುತ್ತ ಹೊರಟು ಹೋದಳು. ಪುಟ್ಟ ಊರಾಗಿದ್ದರೂ ಹಬ್ಬ ಹರಿದಿನ ಆಚರಣೆಗಳಿಗೇನು ಅಲ್ಲಿ ಯಾವದೇ ಅಕ್ಕರೆಗಳಿಗೂ ಕೊರತೆ ಇರಲಿಲ್ಲ. ಊರಿನೆಲ್ಲ ಜನ ಸೇರಿಕೊಂಡು ಒಂದೇ ಕುಟುಂಬದ ಸದಸ್ಯರಂತೆ ಆಚರಣೆಗಳಿಗೆ ಮೆರಗು ನೀಡುತ್ತಿದ್ದರು ಇಂಥ ರೀತಿ ರಿವಾಜಿಗಳಿಂದಲೇ ಆವತ್ತಿನ ಮಹಾ ಶಿವರಾತ್ರಿಗೆ ರಾಜ ಕಳೆಯ ಮೆರಗು ಬಂದಿತ್ತು. ಯಾವದೊ ಕಾಣದ ತುಡಿತ ಏನೋ ಎಂದೂ ಊರ ಬಾಗಿಲಿನ ಅಗಸಿಯನ್ನು ತುಳಿಯದ ಪೋಳಿಯ ಮನಸ್ಸನ್ನು ಊರಿನ ಬೀದಿಗಳು ಆವತ್ತು ಬರಸೆಳೆದಿದ್ದವು. ಅದರಂತೆ ಪೋಳಿಯು ಅಗಸಿಬಾಗಿಲನು ದಾಟಿ ಊರಿನೊಳಕೆ ಲಗ್ಗೆ ಇಟ್ಟ.

ಊರಿನ ಹೊರವಲಯದ ಒಂದು ಸುತ್ತು ಹಾಕಿದ. ಬಿಕೋ ಎನ್ನುತ್ತಿದ್ದ ಊರ ಹೊರಗಿನ ವರ್ತುಳ ರಸ್ತೆಯಿಂದ ಮೆಲ್ಲಗೆ ಊರೊಳಗೆ ಧಾವಿಸಿದ. ಇತ್ತ ಆ ಊರಲ್ಲಿ ಸಡಗರದಿಂದ ಹಬ್ಬದಾಚಣೆಯಲಿ ತಲ್ಲೀನವಾಗಿದ್ದ ಜನರು ಲೌಕಿಕ ಲೋಕದಿಂದ ಬಂಧ ಮುಕ್ತರಾದವಂತೆ ಕಾಣುತ್ತಿದ್ದರು. ಇಂಥ ಸುಸಂದರ್ಭದಲ್ಲಿ ಊರೊಳಗೊಂದು ಯಾರ ಅರಿವಿಗೆ ಬಾರದೆಯೇ ತೆರೆಮರೆಯಲ್ಲೊಂದು ಅವಘಡ ಸಂಭವಿಸಿ ಹೋಗಿತ್ತು. ಊರಿನ ಕೆಳ ಓಣಿಯ “ದುಂಡಸಿ”ಯ ಗಂಡ ನಿಗೂಢ ರೀತಿಯಲ್ಲಿ ಸತ್ತು ಹೋಗಿದ್ದ. ಪಾಪ! ದುಂಡಸಿಯ ಮದುವೆಯಾಗಿ ಇನ್ನು ಮೂರು ತಿಂಗಳು ಸಹ ಗತಿಸಿರಲಿಲ್ಲ ಇಂಥದುದರಲ್ಲಿ ವಿಧಿ ಅವಳ ಬಾಳಿಗೆ ವಕ್ರದೃಷ್ಟಿ ಬೀರಿಯಾಗಿತ್ತು. ದುಂಡಸಿಗೆ ಆಕಾಶವೇ ತಲೆಮೇಲೆ ಬಿದ್ದಂತಹ ಅನುಭವ. ಮೊದಲೇ ದುಂಡಸಿಯ ಬಾಳು ಅನಿಶ್ಚಿತತಗೆ ತತ್ತರಿಸಿ ಹೋಗಿತ್ತು. ಊರಿನ ಸಿರಿವಂತರ ಮನೆಯಲ್ಲಿ ತನ್ನ ತಂದೆತಾಯಿಗಳು ದುಡಿಯುತ್ತಲೆ ಮಡಿದು ಹೋಗಿದ್ದರು. ಇತ್ತ ಮತ್ತೊಮ್ಮೆ ನಲುಗಿದ ಬಾಳಿಗೆ ತೆಪೆ ಹಚ್ಚುವ ಯಕಶ್ಚಿತ ಬಲವು ದುಂಡಸಿಯ ತೋಳುಗಳಲಿ ಇರಲಿಲ್ಲ. ತಲೆಯಮೇಲೆ ಕೈಹೊತ್ತು ಉಮ್ಮಳಿಸಿ ಬಂದ ಅಳುವನ್ನು ನುಂಗಿಕೊಂಡು ಸತ್ತು ಹೋದ ಗಂಡನ ಹೆಣವನ್ನು ನೋಡುತ್ತ ನಿಂತುಬಿಟ್ಟಳು. ಬದುಕಿಗೆ ದಾರಿದ್ರೆ ಅಂಟಿಕೊಂಡರೆ ಅಂಥ ಬದುಕು ಬೆತ್ತಲೆಯಾಗಿ ನಿಟ್ಟುಸಿರುಗಳಿಂದ ತುಂಬಿ ಹೋಗಿಬಿಡುತ್ತದೆ. ಮುರಿದು ಹೋದ ಅರಮನೆಯ ತೊಲೆಗೂ ಬೆಸುಗೆಯನ್ನು ಬೆಸೆದು ಬಿಡಬಹುದು ಆದರೆ ಮುರಿದು ಬಿದ್ದ ಸಂಬಂಧ ಮತ್ತು ಬದುಕಿಗೆ ಎಂದು ಸಾಧ್ಯವಿಲ್ಲ. ಅಂಥದುದರಲ್ಲಿ ದುಂಡಸಿಯ ಬದುಕಿಗೆ ಈ ದಾರಿದ್ರ್ಯವೆಂಬುದು ಆನುವಂಶಿಕವಾಗಿಯೇ ಬಂದಂಥದ್ದು. ಅವಳ ಗಲೀಜು ತುಂಬಿದ ಬದುಕನ್ನು ಸ್ವಚ್ಛಗೊಳಿಸಿ ಪುಣ ಕಳೆತುಂಬಲು ಪ್ರಪಂಚದಲ್ಲಿ ನೀರೆಂಬ ಈ ಮದ್ದಿನ ಅಸ್ತಿತ್ವದ ಮೂಲವೇ ಇಲ್ಲದಂತಾಗಿತ್ತು. ಒಂದು ಕಡೆ ಊರಿನ ಜನ ಹಬ್ಬದ ಸಡಗರದಲ್ಲಿ ಮಿಂದು ಪುಳಕಿಸುತ್ತಿದ್ದರೆ ಇತ್ತ ದುಂಡಸಿಯ ಮನೆಯಲ್ಲಿ ವಿಧಿ ತನ್ನ ಕದಂಭ ಭಾಹುಗಳನ್ನು ಚಾಚಿಯಾಗಿತ್ತು. ತನ್ನ ತೀರಿದ ಗಂಡನನ್ನು ಯಾರಿಗೂ ತಿಳಿಯದ ರೀತಿಯಲ್ಲಿ ಅಂತ್ಯ ಸಂಸ್ಕಾರವನ್ನು ಮಾಡುವ ಅನಿವಾರ್ಯತೆಯ ಬಾಗಿಲಲ್ಲಿ ಬಂದು ನಿಂತು ಬಿಟ್ಟಳು ದುಂಡಸಿ. ಇಂಥ ಸಂಧಿಗ್ಧತೆಯಲ್ಲಿ ತನ್ನ ಅರ್ಧ ತೆರೆದ ಮನೆಯ ಮುಂಬಾಗಿಲಲಿ ಇಣುಕಿ ನೋಡುತ್ತ ನಿಂತಳು. ಎಲ್ಲಿ ನನ್ನ ಗಂಡ ತೀರಿದ ಸುದ್ದಿ ಊರವರಿಗೆ ತಿಳಿದರೆ ವಿಜೃಂಭನೆಯಿಂದ ನಡೆಯುತ್ತಿದ್ದ ಮಹಾ ಶಿವ ರಾತ್ರಿಯ ಹಬ್ಬವು ಮೊಟಕುಗೊಂಡು ಎಲ್ಲಿ ನಾನು ಅಪಖ್ಯಾತಿಗೆ ಒಳಗಾಗಿ ಊರಿಂದ ಬಹಿಸ್ಕಾರಗೊಂಡು ಬಿಡುವನೇನೋ ಎಂಬ ಆತಂಕವು ಅವಳನ್ನು ಕಾಡುತ್ತಿತ್ತು.

ರಾತ್ರಿ ಸಮಯ ಒಂದು ಗಂಟೆಯಾಗುತ್ತಲಿತ್ತು.  ಇತ್ತ, ಊರ ಹೊರಗಿನ  ವರ್ತುಳ ರಸ್ತೆಯನ್ನು ಒಂದು ಸುತ್ತು ಸುತ್ತಿ ಇನ್ನೇನು ಊರಿನಲ್ಲಿನ ಈಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಶಿವ ಭಜನೆಯನ್ನು ನೋಡಲೆಂದು ಪೋಳಿರಾಜು ಹೊರಟು ನಿಂತ. ಹೀಗಿದ್ದಾಗ ಅವನು ದುಂಡಸಿಯ ಮನೆಯ ಮುಂದೆ ದಾಟಿ ಹೋಗುತ್ತಿದ್ದಂತೆ ಬಾಗಿಲ ಸುಳಕಿನಲ್ಲಿ ನಿಂತು ಇವನನ್ನು ನೋಡುತ್ತ ಯಾರಿರಬಹುದು ಎಂದು ಯೋಚಿಸಲು ಶುರುವಿಟ್ಟುಕೊಂಡಳು ದುಂಡಸಿ. ಆತನ ವಿಚಿತ್ರ ಗಡಸು ದೇಹ ಮತ್ತು ಕುದುರೆ ಬಾಲದಂತಿದ್ದ ಉದ್ದನೆಯ ಗಡ್ಡವನ್ನು ಕಂಡು ಅವನು ಪೋಳಿಯೇ ಎಂದು ಅವಳಿಗೆ ಮನವರಿಕೆಯಾಯ್ತು. ಪೋಳಿಗೂ ಅದ್ಯಾಕೋ ಹೆಜ್ಜೆಗಳು ಭಾರವಾಗಿ ಡುಂಡಸಿ ಮನೆಯ ಮುಂದನ ರಸ್ತೆ ಬದಿಯ ಜಗಲಿಯ ಮೇಲೆ ಕುಳಿತು ಬಿಟ್ಟನು. ದುಂಡಸಿಗೆ ಮನದಲ್ಲಿ ಏನೋ ಪಡೆದಂತಹ ಅನುಭೂತಿ ಮೆಲ್ಲನೆ ಚಿಗುರೊಡೆಯಿತು. ತೀರಿದ ತನ್ನ ಗಂಡನನ್ನು ಸಾಗಿಸಲು ಒಂದು ಸಜೀವ ದೇಹ ಸಿಕ್ಕಂತಾಯ್ತು.

ಸಿ.ಎಸ್.ಮಠಪತಿ