Thursday 7 June 2012

ಏಕೆ ಬರುವೆ ಬಾಳಿಗೆ

ಏಕೆ ಬರುವೆ ಬಾಳಿಗೆ
ಬವಣೆ ತುಂಬಿದ ಬೇಗುದಿಯ ತೀರಕೆ
ಬವಣೆಯಾಚಿನ ಬದುಕಿಗೆ
ಕರೆದೋಯ್ಯಲಾಗದು ಈ ಬಡವಗೆ..

ಹುಚ್ಚು ಛಲದ ನಿಶ್ಯಕ್ತ ಕೈಗಳು
ಬರೆಯಬಹುದು ಎರಡು ಕವನವ
ಕವನಗಳೆ ನಮಗಲ್ಲ ು ಉದರಕೆ
ಕವಳ ಕಾಳ ವೃಷ್ಟಾನ್ನವು.


ನೂರು ಅಕ್ಷರ ನಾಲ್ಕು ಪದಗಳು
ಕಂಬನಿಯ ಹರಿಸುವ ನಾಲ್ಕು
ಭಾವನೆ ಏನು ಮಾಡವು
ಬಿರಿದ ಬದುಕಿಗೆ ಬಾರದಿರು ನೀ 
ಬಾಳಿಗೆ..


ಯಾವ ಅಡವಿಗೆ ಹೋಗಲಿ
ಯಾವ ಕಲ್ಲು ಮಣ್ಣು ತರಿಸಲಿ
ನಿನ್ನ ಇರುವಿಗೆ ಗೂಡು ಕಟ್ಟಲು
ಯಾವ ಕುಶಲ ಕರ್ಮಿಯ ಕರೆಸಲಿ,
ಬೇಡ ನೀ ಬರಬೇಡ ಬರೀ
ಬವಣೆ ತುಂಬಿದ ಬಾಳಿಗೆ..


ಹರಿಯುತಿಹುದು ಸಿರಿತನದ ಹೊಳೆಯು
ಕಣ್ಣು ತೆರೆದು ನೋಡು ನೀ
ಧನಿಕ ನಿನ್ನ ಲಹರಿ ಬದುಕಿಗೆ
ಬರೆಯಬಹುದು ಮುನ್ನುಡಿ
ಕಾಣದಿರು ನೀ ಹುಚ್ಚುಗನಸನು
ಒಪ್ಪಿಕೋ ನನ ಮಾತನು...

ಸಿ.ಎಸ್.ಮಠಪತಿ

Wednesday 6 June 2012

ಪ್ರಿಯ ಹೃದಯ..


ನೀ ಬೆಳೆಸಿ ಪ್ರೀತಿಯ ಬಯಕೆಯ
ಮಮತೆಯ ಮಳೆ ಸುರಿಸಿ ಹೃದಯ
ನಿನ್ನೊಲುಮೆ ಇದ್ದರೆ ಸಾಕು
ಓ ಹೃದಯ ಬಾಳ ಸಂಗಾತಿ ಆಗುವೆಯಾ..!!

ನಿನ್ನ ಕಣ್ಣಕಾಂತಿಯಿಂದ ಬೆಳಕನ್ನು ಬೀರಿದೆ ಹೃದಯ
ಮೃದುಮಾತು ಓಲೈಕೆಯ ಹವೆಯನ್ನು ನೀಡಿದೆ ಹೃದಯ
ಅನುಭಾವ ಹಸ್ತದ ಮೇಲೆ ಅನುಕಂಪ ಹರಿಸಿದೆ ಹೃದಯ
ನೋಡು ಬಾ ಒಲವಿನ ಫಸಲು ಹುಲುಸಾಗಿ ಬೆಳೆದಿದೆ ಹೃದಯ..!!

ಈ ನನ್ನ  ಒಲವಿನ ಬಯಕೆ ಹೆಮ್ಮರವಾಗಿ ಬೆಳೆದು
ಬದುಕಲು ಮನೆಯ ಕಟ್ಟಿ  ಬಾ ಎನುತಿದೆ..
ನೂರಾರು  ಹಕ್ಕಿಯು ಈಗ ಉಯ್ಯಾಲೆ ಆಡುವ ಸಮಯ
ನಿನ ಮಡಿಲ ಒಡಲಿಗೆ ನಾನು ಹಸೂಗೂಸು ನಲ್ಮೆಯ ಹೃದಯ
ನಿನ ಮಡಿಲ ಒಡಲಿಗೆ ನಾನು ಬರಲೇನು ನಲ್ಮೆಯ ಹೃದಯ
ಬಾ ಎಂದು ಕರೆದರೆ ಸಾಕು ಬಹುದಿನ ಬಾಳುವೆ ಹೃದಯ..!!

ಚಿನ್ಮಯ್....



Tuesday 5 June 2012

ನೀತಿ(ಕಥೆ)







         ಇದೊಂದು ದೂರದಿಂದ ಕಂಡಂಥ ಜೀವನ ಕ್ರಮದ ನೆನಪಿನ ಬುತ್ತಿಯಿಂದ ಹೊರಹೊಮ್ಮಿದಂಥ ಕಥೆ.ಕ್ಷೌರಿಕನನ್ನು ಕಂಡು ಕೋಣವು ಕಾಲೆತ್ತಿತ್ತಂತೆ;ನನ್ನ ಬಗಲಲ್ಲಿನ ಒಂದಿಷ್ಟು ಜವುಳ ಮುಂಡನೆ ಮಾಡಿ ಹೋಗು ಅಂತ, ಅಂಥ ಅವಕಾಶವಾದಿಗಳು ತುಂಬಿರುವಂಥ ಕೊಟ್ಟಿಗೆ ಅದು. ಅಂಥವರಲ್ಲಿ ಪಾಪಣ್ಣ ಒಬ್ಬ..!!ಪ್ರಾಯಶಃ ಪಾಪಣ್ಣಗೆ ನಲವತ್ತರ ಹರೆಯ,ಓದಿದ್ದು ಎರಡೊ.ಮೂರನೆಯ ತರಗತಿ ಇರಬಹುದು,ಆದರೆ ಅವನು ಧರಿಸುತ್ತಿದ್ದ ಬಟ್ಟೆ,ಮಾತಿನ ಶೈಲಿ.ವರ್ತನೆ,ನಾಟಕೀಯ ನಡುವಳಿಕೆ ಎಲ್ಲವು ಒಬ್ಬ ಪದವಿಧರನನ್ನು ಮೀರಿಸುವಂತಿತ್ತು.ಹಾಳೂರಿಗೆ ಉಳಿದವನೆ ಗೌಡ ಎನ್ನುವಂತೆ,ಶ್ವೇತ ವರ್ಣದ ತಿಳಿ ನೀಳಿ ಹಾಕಿದ ಧೋತಿ, ನೆಹರು ಅಂಗಿ,ಗಾಂಧಿ ಟೋಪಿ ಕೈಲೊಂದು ಚಿಕ್ಕ ಬ್ಯಾಗ್ ಹಿಡಿದು ದೌವುಲತ್ತಿನಿಂದ ಜೋಡು ಅಟ್ಟೆಯ ಚರ್ಮದ ಚಪ್ಪಲಿ ಸದ್ದು ಮಾಡುತ್ತ ಬೆಳ್ಳಂಬೆಳಿಗ್ಗೆ ಏಳು ಗಂಟೆಗೆ ಗ್ರಾಮದ ತಾಲುಕು ಘಟಕಕ್ಕೆ ಹೊರಟು ಹೋಗುತ್ತಿದ್ದ.ಮತ್ತೆ ತನ್ನದೈನಂದಿನ ಕೆಲಸಗಳನ್ನು ಮುಗಿಸಿಕೊಂಡು ಕಟ್ಟ ಕಡೆಯ ಬಸ್ಸಿಗೆ ರಾತ್ರಿ ಎಲ್ಲರು ಉಂಡು ಮಲಗುವ ಸಮಯಕ್ಕೆ ಹಳ್ಳಿಗೆ ಮರಳುತ್ತಿದ್ದ.

         ಓದು ಒಕ್ಕಾಲಾದ್ರು ಅವನ ಬುದ್ಧಿ ಮಾತ್ರ ಮುಕ್ಕಾಲು!ಹಳ್ಳಿಯ ಗ್ರಾಮ ಲೆಕ್ಕಿಗನಿಂದ ಹಿಡಿದು ತಹಸೀಲ್ದಾರವರೆಗೂ ಅವನ ಪರಿಚಯದ ಕೊಂಡಿ ಬೆಳೆದಿತ್ತು.ಕೆಲವೊಂದು ರಾಜಕೀಯ ಪುಂಡರ ಸ್ವಚ್ಛ ನಂಟು ಅವನಿಗಿತ್ತು.ಸರ್ಕಾರದ ಯಾವದೆ ಜನಪರಯೋಜನೆಗಳು ಅನುಷ್ಟಾನಗೊಂಡರೆ ಸಾಕು,ಅವುಗಳಿಗೆ ತಕ್ಷಣ ಹೊಂಚು ಹಾಕಿಬಿಡುತ್ತಿದ್ದ.

        ಅವನ ಕೈಯಲ್ಲಿ ಹಳ್ಳಿಯ ಎಷ್ಟೊ ಮಹಿಳೆಯರು ಪತಿ ಬದುಕಿದ್ದಾಗಲೆ ವಿಧವೆಯರಾಗಿದ್ದರು,ದೈಹಿಕ, ಮಾನಸಿಕ ಸಧೃಡರು ವಿಕಲಚೇತನರಾಗಿದ್ದರು, ಐವತ್ತರ ಆಸುಪಾಸಿನವರು ವಯೋವೃದ್ಧರಾಗಿದ್ದರು. ಹೀಗೆಯೆ ಕಾಗದದ ಮೇಲೆ ಜನರನ್ನು ಈ ರೀತಿಯಾಗಿ ಮಾರ್ಪಡಿಸಿ ಅವರಿಂದ ಚಂದಾವಸೂಲಿ ಮಾಡುತ್ತಿದ್ದ ಪಾಪಣ್ಣ.

        ಆವತ್ತು ಭಾನುವಾರ ಕೈಯಲ್ಲಿ ಯಾವ ಕೆಲಸ ಇಲ್ಲದೆ ಪಾಪಣ್ಣ ಖಿನ್ನನಾಗಿ ತನ್ನ ಹೊಲದ ಕಡೆಗೆ ಹೆಜ್ಜೆ ಹಾಕಿದ್ದ, ಅವನ ವಿಚಾರ ಪಟಲದಲ್ಲಿ ಅವೆ ಸಂಗತಿಗಳ ಕಾರುಬಾರು, ಮತ್ತೆ ಯಾರಿಗೆ ಏನು ಮಾಡಬೇಕು ಹೇಗೆ ಪಾಪದ ಹಣ ಈ ಪಾಪಣ್ಣನ ಜೇಬಿಗೆ ಸ್ವಾಗತಿಸಬೇಕು ಎನ್ನುತ್ತಲೆ ಹೊಲದ ಸೀಮೆಯನ್ನು ತಲುಪಿಯಾಯ್ತು. ಅಲ್ಲಿ ಅಣತಿ ದೂರದಿಂದ ತನ್ನ ಎಡಗೈಯಿಂದ ಕಣ್ಣುಗಳಿಗೆ ಬಿಸಿಲಿನ ಮರೆಮಾಡಿಸಿ ಅವನ ವಯೋವೃದ್ಧ ತಂದೆ ಕೀರಲು ಧ್ವನಿಯಲ್ಲಿ ಯಾರದು ಅಲ್ಲಿ ಬರ್ತೀರೊದು’? ಪಾಪಣ್ಣ- ‘ಅಪ್ಪನಾನು,ಪಾಪಣ್ಣ ಕಣಪ್ಪಹೊಹೊ ಪಾಪಣ್ಣ ಈಗ ಬಂದಿಯೆನಪ್ಪ ಇವತ್ತು ಇಂಥ ಸುಡು ಬಿಸಿಲಲ್ಲಿ ಯಾಕೆ ಬರೋಕೆ ಹೋದೆ?ಮನೆಯಲ್ಲಿನೆ ಇರಬೇಕಿತ್ತಲ್ಲ,ಅಷ್ಟಕ್ಕು ಇಲ್ಲಿ ಅಂಥ ಕೆಲಸವಾದರು ಏನಿತ್ತು? ಪಾಪಣ್ಣ-ಇರಲಿ ಬಿಡಪ್ಪ ನಾನೇನು ದಿನಾಲು ಬರುತ್ತೆನೆಯೇ?ಸರೀ ಬಿಡಪ್ಪ ನೀನು ಇಲ್ಲಿಯೆ ಈ ಬೆವಿನ ಮರದ ಕೆಳಗೆ ಮಲಗಿರು ನಾನು ಬಾವಿಯಿಂದ ಒಂದು ಚೊಂಬು ನೀರು ತರುತ್ತೇನೆ ನೀನು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ತಗೊಳುವಂತೆ ಅಂಥೇಳಿ, ತಾತ ಬಾವಿಕಡೆಗೆ ದೌಡಾಯಿಸಿದ.

        ಬೆವಿನ ಮರದ ಬುಡಕ್ಕೆ ಒರಗಿ ಬಾವಿಕಡೆಗೆ ಹೋಗುತ್ತಿದ್ದ ಅಪ್ಪನನ್ನೆ ಹಸಿವುಗಣ್ಣಿನಿಂದ ಪಾಪಣ್ಣ ನೋಡುತ್ತಿರುವಾಗಲೆ,ಅವನ ತಲೆಯಲ್ಲಿ ಮಿಂಚಿನಂತೆ ಒಂದು ವಿಚಾರ ತೇಲಿ ಹೋಯ್ತು ಅದು ಅವತ್ತು ಅವರಮ್ಮನನ್ನು ವಿಧವೆಯಾಗಿಸು ವಿಚಾರ.ತಟ್ಟನೆ ತನ್ನ ಪಾಪ ಕೆಲಸದ ಜಂಟಿ ಸಹೊದ್ಯೋಗಿ ಪೋಟೊ ಗ್ರಾಪರ್ ಕೈಲಾಸಿಗೆ ಪೋನಾಯಿಸಿ ಕ್ಯಾಮರ ಜತೆಗೆ ಬರಲು ಹೇಳಿದ. ಕೈಲಾಸಿ ಅಲ್ಲಿಗೆ ಬರುವಷ್ಟರಲ್ಲಿ ತನ್ನ ಅಪ್ಪನಿಗೆ ತನ್ನ ದುರುದ್ದೇಶವನ್ನು ಬಚ್ಚಿಟ್ಟು ತನಗೆ ಬೇಕಾದ ಕೋನದಲಿ ಕ್ಯಾಮರಾಗೆ ಪೋಸ್ ಕೊಡಲು ಹೇಳಿದ. ಏನು ಅರಿಯದ ಮುಗ್ಧ ತಂದೆ ಮಗನ ಇಚ್ಛೆಯಂತೆಯೆ ನಡೆದುಕೊಂಡ.

        ತನ್ನ ಅಪ್ಪನ ಮೃತ ಭಂಗಿಯ ನಾಲ್ಕಾರು ಭಾವಚಿತ್ರಗಳನ್ನು ತೆಗೆದುಕೊಂಡು ಅಪ್ಪ ಸತ್ತ ಘಟನೆಗೆ ಅವನ ತಂಡದ ಸದಸ್ಯರಿಂದ ಸಾಕ್ಷಿಗಳಿಬ್ಬರ ರುಜುಗಳನ್ನು ಪಡೆದು ಮಾರನೆ ದಿನ ಉಪನೋಂದನಾಧಿಕಾರಿಯಿಂದ ಮರಣ ಪ್ರಮಾಣ ಪತ್ರವನ್ನು ಪಡೆದ. ಅಲ್ಲಿಂದ ತನ್ನತಾಯಿಗೆ ವಿಧವಾ ಪಿಂಚನಿಗೆ ಅರ್ಜೀಯನ್ನು ಸಂಭಂದ ಪಟ್ಟ ಇಲಾಖೆಗೆ ರವಾಣಿಸಿದ.

       ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಪಾಪಣ್ಣನ ತಾಯಿಗೆ ತಿಂಗಳಿಗೆ ಎರಡು ನೂರು ರೂಪಾಯಿ ಪಿಂಚನಿ ಬರಲಾರಂಭಿಸಿತು.ತನ್ನ ತಾಯಿಗೂ ಕೂಡಾ ಅಂಥದೆ ಸಮಜಾಯಿಸಿ ನೀಡಿ ಯಾವದೆ ಪ್ರಶ್ನೆಯನ್ನು ಮಾಡದಂತೆ ನೋಡಿಕೊಂಡ.ಈಗ ಊರಿನ ಅನ್ಯ ಕಾಗದದ ವಿಧವೆಯರ ಪಟ್ಟಿಗೆ ಸ್ವತಹ ತನ್ನ ತಾಯಿಯನ್ನು ಸೇರಿಸಿದ.

       ಕಾಲಕಳೆದಂತೆ ಇಂಥದ್ದೆ ಪಾರಮ್ಯವನ್ನು ಮೆರೆಯುತ್ತ ಊರಿನ ಒಂದು ವರ್ಗದ ಜನಕ್ಕೆ ಅಚ್ಚುಮೆಚ್ಚಿನ ಕೆಚ್ಚೆದೆಯ ನಾಯಕ ಎಂದೆನಿಸಿಕೊಂಡ.ಇನ್ನೊಂದು ವರ್ಗದ ಜನಕ್ಕೆ "ಪಾಪಿ ಪಾಪಣ್ಣ" ಎನಿಸಿಕೊಂಡ. ಹೀಗಿರುವಾಗ ಯಾವಾಗಲು ಹೊಲದ ಒಂದು ಮುರಕಲು ಗುಡಿಸಿಲಿನಲಿದ್ದು ಗದ್ದೆಯ ಕೆಲಸವನ್ನು ನೋಡಿಕೋಳ್ಳುತ್ತಿದ್ದ ತಂದೆ ಮುದಿವಯಸ್ಸಿಗೆ ಸಂಭಂದ ಪಟ್ಟ ಶ್ರವನ ಮತ್ತು ದೃಷ್ಟಿ ಕ್ಷೀನತೆಯಿಂದ ಮನೆಯ ಹಾಸಿಗೆ ಹಿಡಿದುಬಿಟ್ಟ .ಇತ್ತ ವಿಧಿಯು ಕೂಡ ಪಾಪಣ್ಣನ ಬಾಳಿಗೆ ಕದಂಭ ಭಾಹುಗಳನ್ನು ಚಾಚಿಯಾಗಿತ್ತು. ಪಾಪಣ್ಣ ಪುಪ್ಪಸ ಅರ್ಬುದಕ್ಕೆ ತುತ್ತಾಗಿ ಹೋಗಿದ್ದ.ರಾಜ್ಯ, ಹೊರರಾಜ್ಯದ ಹಲವಾರು ಆಸ್ಪತ್ರೆಗಳನ್ನು ಸುತ್ತಿ ಕೊನೆಗೆ ಸಾವಿನ ದ್ವಾರಬಾಗಿಲಿಗೆ ಬಂದು ನಿಂತಿದ್ದ. ಅಕ್ಕಪಕ್ಕದಲ್ಲಿನ ಮಂಚಗಳ ಮೇಲೆ ಇರ್ವರ ಆರೈಕೆಯನ್ನು ಸಮನಾಗಿ  ಅವರಿಬ್ಬರ ಹೆಂಡತಿಯರು ನೋಡಿಕೋಳ್ಳುತ್ತಿದ್ದರು.ವಿಧವೆ ತಾಯಿ ತನ್ನ ಗಂಡನ ಹಾಗೂ ಸೌಭಾಗ್ಯವತಿ ತನ್ನ ಹೆಂಡತಿ ಅವನ ಆರೈಕೆಯನ್ನು ನೋಡಿಕೋಳ್ಳುತ್ತಿದ್ದಳು.

        ಈಗ ಇಡೀ ಊರಲ್ಲಿ ಒಂದೆ ಗುಲ್ಲು. ಪಾಪಣ್ಣ ತೀರಿಹೋದ ಮೇಲೆ ಅವನ ಹೆಂಡತಿಗೆ ಯಾರು ವಿಧವಾ ಪಿಂಚನಿಯನ್ನು ಮಾಡಿಸಿಕೊಡುತ್ತಾರೆ? ಆವಾಗ ಒಂದಿಷ್ಟು ಜನ ಅಯ್ಯೋ ಸುಮ್ಮನಿರಿ ನಿಮಗೆ ಗೊತ್ತಲ್ಲ,ಪಾಪಣ್ಣ ಯಾರು ಅಂತ,ಬಹುಶ್ ಆಗಲೆ ಮಂಜುರು ಮಾಡಿಸಿದ್ದರು ಮಾಡಿಸಿರಬಹುದು ಎಂತೆಲ್ಲ ತಮ್ಮತಮ್ಮಲ್ಲಿಯೆ ಮಾತನಾಡಿಕೋಳ್ಳಲು ಶುರು ಇಟ್ಟುಕೊಂಡಿದ್ದರು.

       ಇತ್ತ ಪಾಪಣ್ಣನನ್ನು ನೋಡಲೆಂದು ಕಾಗದದ ವಿಧವೆಯರು,ವಿಕಲಚೇತನರು,ವಯೋವೃದ್ಧರು ತಂಡೋಪತಂಡವಾಗಿ ಬರಲತ್ತಿದರು ನಾಲ್ಕು ಮರುಕದ ಮಾತನ್ನಾಡಿ ಹೆಂಡತಿಗೆ ಸಾಂತ್ವನ ಹೇಳಿ ಹೋಗುತ್ತಿದ್ದರು.ಈಗ ಪಾಪಣ್ಣನ ಅರಿವಿನ ಕಣ್ಣು ಎಚ್ಚರಗೊಂಡಿದೆ ಕೆಟ್ಟಮೇಲೆ ಬುದ್ಧಿ ಬಂತು ಎನ್ನುವ ಹಾಗೆ..!!ಈಗ ಪಾಪಣ್ಣಗೆ ಕಾಡುತ್ತಿರುವ ಪ್ರಶ್ನೆಗಳು ಒಂದೇ ಎರಡೇ???ನೀತಿ ಮರೆತು ಅನೀತಿಯ ಹಾದಿಯಲ್ಲಿಯೆ ಜೀವನ ಕಳೆದ ಪಾಪಣ್ಣ, ಅಪ್ಪ ಬದುಕಿರುವಾಗಲೆ ತಾಯಿಯನ್ನು ವಿಧವೆ ಮಾಡಿದ . ಜೀವಿತ ಅಪ್ಪನ ಮರನಾನಂತರ ಬರುವ ಪಿಂಚನಿ ಹಣದಿಂದ ಅಪ್ಪ ಸಾಯಿವ ಮೊದಲೆ ತಾ ಸತ್ತು, ಅದೇ ಹಣದಲ್ಲಿ ಶವಸಂಸ್ಕಾರವನ್ನು ಮಾಡಿಸಿಕೊಂಡ.ಊರಿಗೆಲ್ಲ ತಿಥಿ ಊಟ ಮಾಡಿಸಿದ.ಕಾಲನ ಕೈಯಲ್ಲಿನ ಬೊಂಬೆಗಳು ನಾವು ಅಂಥ ಇಡೀ ಹಳ್ಳಿಗೆ ಸತ್ತು ಸಾರಿದ..!!!

ಸಿ.ಎಸ್.ಮಠಪತಿ

Sunday 3 June 2012

ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾನಲ್ಲಿ ಮೂರು ಜನರ ಪಾಲು..





        ಅವು 2004ರ ಮಧ್ಯದ ದಿನಗಳು,ಆಗ ತಾನೆ ನಾನು ಮನೆಯಿಂದಾಚೆಗೆ ಬೆಳೆದು ಬಂದು ಹೆಚ್ಚುಕಡಿಮೆ ನಾಲ್ಕುವಸಂತಗಳು ಭೂತಕಾಲವನ್ನು  ಸೇರಿಯಾಗಿತ್ತು. ಚಿಕ್ಕವಯೋಮಾನದಲ್ಲಿಯೇ ಬದುಕಿನ ಒಂದಷ್ಟು ದಟ್ಟ ದರಿದ್ರ ಮುಖಗಳನ್ನು ಸಹ ನೋಡಿಯಾಗಿತ್ತು. ಬದುಕಿನಲಿ ಏನನ್ನಾದರು ಸಾಧಿಸಬೇಕೆಂಬ ಬೇತಾಳನನ್ನು ಹೆಗಲೇರಸಿಕೊಂಡು ಸುತ್ತಾಡುತಿದ್ದ ದಿನಗಳು. ಸಾಮಾಜಿ,ಕೌಟುಂಬಿಕ ಮತ್ತು ಸಂಬಂಧಗಳಿಂದಾದ ಸೋಲುಗಳಿಂದ ತತ್ತರಿಸಿ ಏಕಾಂಗಿತನದ ಬಾಳಿಗೆ ಅಂಟಿಕೊಂಡಿದ್ದೆ. ಅರಮನೆಯ ಮಲ್ಲಿಗೆಗಳೇ ಅರಳಿ ಬಾಡಿ ಹೋಗುವಾಗ ನಾನು ಬೀದಿಯ ಚೆಂಡ ಹೂ ನನ್ನ ಪಾಡೆನು?? ಅರಳುವದು ಬೇರೆಯ ಮಾತು ಅದಕ್ಕಿಂತ ಮೊದಲೆ ಯಾರದೋ ಕಾಲಿಗೆ ಆಟಿಕೆಯಾಗ ಬಹುದಲ್ಲವೆ,ಎಂಬ ಭಯದಲ್ಲಿಯೇ ಹುಬ್ಬಳ್ಳಿ ನಗರದಲ್ಲಿ ಪದವಿ ವಿದ್ಯಾಬ್ಯಾಸಕ್ಕಾಗಿ ಏನೆಲ್ಲ ಕಷ್ಟ ಕಾರ್ಪನ್ಯದಿಂದ ಸುಮಾರು 40,000/- ಹೊಂದಿಸಿ ಕಾಲೇಜು ಶುಲ್ಕ ಕಟ್ಟಿದೆ.ಮನೆಯ ಅಡಿಪಾಯ ಹಾಕಿದಾಕ್ಷಣ ಅದಕ್ಕೆ ನಾವೊಂದು ಗೃಹ ಎನ್ನ ಬಹುದೆ? ಮತ್ತೆ ಅದೇ ಹಣಕಾಸಿನ ತೀಕಲಾಟ ಹೇಗೋ ಆ ಹಣಕಾಸಿನ  ಏರಿಳಿತಕ್ಕೆ
 (Financial crisis)ಗೆ ಹೊಂದಿಕೊಂಡು ಬಿಟ್ಟೆ.


        ಅಲ್ಲಿ ಒಂದು ಔಟ ಹೌಸ್ ಮಾಲಿಕರ ಮನೆಯಲ್ಲಿ ಕೇವಲ ಇಬ್ಬರೆ ಜನ ವಾಸವಾಗಿದ್ದರು, ಅರವತ್ತು ದಾಟಿದ ದಂಪತಿಗಳು.ಅವರು ಔಟ ಹೌಸ್ ನನಗೆ ಕೇವಲ ನಾನೂರು ರೂಗೆ ಬಾಡಿಗೆ ನೀಡಿದರು, ಅದರ ಹಿಂದಿನ ದು(ದೂ)ರಾಲೋಚನೆ ಅಂದರೆ ನಾನು ಅವರ ಮನೆಯ ಕಾವಲಿನ ಜತೆಗೆ ಅಲ್ಲಿ ಉಳಿದುಕೊಳ್ಳಬೇಕಂಬ ಸತ್ಯ ಆಮೇಲೆ ಅರ್ಥವಾಯ್ತು.ಆ ನಾನೂರು ಬಾಡಿಗೆ ಭರಿಸುವದೇ ನನಗೆ ಕಷ್ಟ ಎನಿಸಿತು ಆವಾಗ ಆ ಮೂರ್ತಿ ಆಂಟಿಯಿಂದ ಪರವಾಣಿಗೆ ಪಡೆದು ಮತ್ತೆ ನನ್ನ ಜತೆಗೆ ಮತ್ತಿಬ್ಬರ ಸ್ನೇಹಿತರನ್ನು ಸೇರಿಸಿಕೊಂಡೆ.

        ಅಡುಗೆ ಮಾಡುವ ಕಲೆ ನನಗೆ ಚೆನ್ನಾಗಿ ಗೊತ್ತಿತ್ತು ಅದರಿಂದ ನನ್ನ ಆ ವಾಸ ಸಂಗಾತಿಗಳು ಬೇಗನೆ ನನ್ನ ಜತೆ ಹೊಂದಿಕೊಂಡರು.ನಾನು ಮಾಡಿ ಬಡಿಸುತ್ತಿದ್ದ ಒಂದೊಂದು ಮೆನು ಅವರಿಗೆ ಅತೀ ಇಷ್ಟವಾಗಿ ಹೊಯ್ತು. ದಿನವೆಲ್ಲ ಕಾಲೇಜು ಮುಗಿಸಿ ರಾತ್ರಿ ಹೊತ್ತು ಕೆಲಸಕ್ಕೆಂದು ಸೇರಿಕೊಂಡೆ ಅದು 24*7 ಔಷಧ ಮಳಿಗೆ ಅಲ್ಲಿ ಒಂದು ದಿನ ನಾನು ಮರುದಿನ ನನ್ನ ಗೆಳೆಯ ಪ್ರಸಾದ್ ಹೀಗೆ ಇಬ್ಬರು ಆ ಕೆಲಸವನ್ನು ಹಂಚಿಕೊಂಡೆವು, ಅದರಿಂದ ನಮಗೆ ಸಂದಾಯವಾತ್ತಿದ್ದ ಸಂಬಳ ರೂ-3000., ಅದನ್ನೆ ಸಮಪಾಲಾಗಿ ಹಂಚಿಕೊಳ್ಳುತ್ತಿದ್ದೆವು.


        ಪಠ್ಯದ ಜತೆಗೆ ಪಠ್ಯೇತರ ಬರಹಗಳನ್ನು ರಾತ್ರಿಯಲ್ಲ ಓದುತ್ತ ಕುಳಿತುಕೊಂಡು ಬಿಡುತ್ತಿದ್ದೆ.ಆಹಾ ಆ ಸಾಹಿತ್ಯ ಓದುವಿಕೆಯಲ್ಲಿ ಸಿಗುತ್ತಿದ್ದ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.ಅವುಗಳ ಏರಿಳಿತದಲಿ ಉಯ್ಯಾಲೆ ಆಡಿದ ಅನುಭವ ಹೀಗೆಯೆ ನಾಲ್ಕು ವರ್ಷ ನನ್ನ ಪಯಣ ಒಂದೆ ದಾರಿಯಲ್ಲಿ ಸಾಗಿ ಹೊಯ್ತು.

        ಸಂಜೆ ಅಪರೂಪಕ್ಕೊಮ್ಮೆ ಸುತ್ತಾಡಲು ಹೋಗುತ್ತಿದ್ದ ನಾವು ಎಲ್ಲರಂತೆ ಹೊರಗಡೆ ಏನಾದರು ತಿನ್ನೋಣ ಅಂದುಕೊಂಡಾಗಲೆಲ್ಲ ಕೂಡಿಸಿ,ಕಳೆದು,ಗುಣಿಸಿ,ಬಾಗಿಸಿ ಕೊನೆಗೆ ಚಹಾ ಕುಡಿಯೋಣ ಎಂಬ ಒಕ್ಕೊರಲಿನ ತಿರ್ಮಾಣಕ್ಕೆ ಬರುತಿದ್ದೆವು. ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾನಲ್ಲಿ ಮೂರು ಜನ ಕುಡಿಯುತ್ತಿದ್ದೆವು ಅಂದರೆ,’’ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾನಲ್ಲಿ ಮೂರು ಜನರ ಪಾಲು”…!!! ಜೇಬಿನಲ್ಲಿ ಒಂದೊಂದು ರೂಪಾಯಿಗು ಘನವಾದ ಬೆಲೆ ಸಂದಾಯಗುವಂಥ ಸಮಯ ಅದು..!! ಈಗ ಮಾಸಿಕ 30 ರಿಂದ 40 ಸಾವಿರ ದುಡಿಯುತ್ತಿರುವ ನನ್ನಲ್ಲಿ ಆಗಿನ ದಿನಗಳಲ್ಲಿ ಇದ್ದಂಥ ಆಶೆಗಳಿಲ್ಲ, ಸುಂದರ ಕನಸುಗಳಿಲ್ಲ, ಬದುಕು ಮಡುಗಟ್ಟಿದೆ ಹಣದಾಶೆಯ ಮಸಣಸದೃಶ್ಯ ವಾಂಛೆಯ ನೆರಳಿನಡಿ.ಮತ್ತೆ ನಾನು ನಾನಾಗಬೇಕು ನನ್ನಲಿ ನನ್ನನು ನಾ ಕಾಣಲು…!!!

       ಅಂಥ ಚಿಕ್ಕ ಕೊಠಡಿ, ಒಂದು ಸ್ಟೌವ್, ಸುಂದರ ಕನಸುಗಳು, ಪ್ರೀತಿಸುವ ಗೆಳೆಯರು,ಒಂದು ಸೌಂಡ್ ಸ್ಲೀಪ್,
ಮನಸನ್ನು ಘಾಸಿಗೊಳಿಸದ ಅನುಭವಗಳು,ಅರ್ಧ ಕಪ್ ಚಹಾ, ಪ್ರಜಾವಾಣಿ ಡೆಕ್ಕನ್ ದಿನ ಪತ್ರಿಕೆಗಳು,ತೊಳೆದು ಹಾಕಲು ಬಹಳ ಅನಿಸದಷ್ಟು ಧಿರಿಸುಗಳು,ಮೂರು ತಿಂಗಳಿಗೊಂದು ಸಿನೆಮಾ, ಸೆಲ್ಪ್ ಪ್ರಿಪೆರಡ ಆಹಾರ...ಹಾಗೆ ಚಿಕ್ಕ ಆಶೆಗಳ ದೊಡ್ಡ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಮತ್ತೆ ನಾ ಕಾಣಬೇಕು ನಿನ್ನನು ಓ ನನ್ನ ಬಡತನದ ಬದುಕೆ ನಿನ್ನಲ್ಲಿ ಸಿರಿತನದ ಸುಖವನ್ನು ಈ ಹಣದ ಮನೆಯಲಿ !!!

ಸಿ.ಎಸ್.ಮಠಪತಿ

Friday 1 June 2012

ಬದುಕು ಬಣ್ಣನೆ




             ಓ ಬದುಕೆ ನಾನು ನಿನ್ನನು ಬಣ್ಣಿಸಲೆ ಬೇಕು. ನನಗೆ ನೀನು ಯಾಕೆ ಎಂಬ ಸವಾಲನ್ನು  ಕೇಳಿದರೆ ಅದರಿಂದ ನಾನು ಅಧೀರನಾಗಲಾರೆ,ವಿಚಲಿತವಂತು ಇಲ್ಲವೆ ಇಲ್ಲ…! ತಿಳಿದವರು ಆಡಿಕೋಳ್ಳುತ್ತಾರೆ ನಿನ್ನ ದಾರಿಯಲಿ ನಾವು ಕೇವಲ ಕುರುಡ ಪಯಣಿಗರು ಅಂತೆಲ್ಲ.ಯಾಕೆ ನಾವು ಹುಟ್ಟಿದ ಮೇಲೆಯೆ ಅಲ್ಲೆವೆ ನಿನ್ನ ಜನನವಾಗಿದ್ದು? ನಮ್ಮಿಂದ ನೀನು ವಿನಹಃ ನಿನ್ನಿಂದ ನಾವಲ್ಲ,ನಾವು ಜನಿಸದೆ ಇದ್ದಿದ್ದರೆ ನಮ್ಮ ಬದುಕು ನೀ???  


           ನಾವು ಪ್ರಕೃತಿ ನಿರ್ಮಿತ ನೀನು ನಮ್ಮ ನಿರ್ಮಿತ.ನಾವು ನಿನ್ನನ್ನು ಆಳಬೇಕಾದರೆ ನಿನ್ನುನ್ನು ನಾವು ಮೊದಲು ಗೆಲ್ಲಲೆಬೇಕೆಂಬ ಸತ್ಯವನ್ನು ಅರಿತ ಹುಂಬ ನಾನು. ನಾನು ನನ್ನಂತೆ ನನಗೆ ಬೇಕಾದ ರೀತಿ,ರೀವಾಜಿನಲಿ ನಿನ್ನನ್ನು ರೂಪಗೋಳಿಸಲು ಅಲೆದಾಡಿದ ಗಲ್ಲಿ ಹಾದಿ-ಬೀದಿ ಒಂದೆ ಎರಡೇ…..? ದ್ವಂದ್ವ, ನಿರಾಶೆ, ಸೋಲು, ದಾರಿದ್ರ್ಯ, ಅಸಹ್ಯ, ಬಡತನ, ನಿಸ್ಸಾಯಕತೆ,ಏದುಸಿರು ಹೀಗೆ ಸಂತೋಷದ ಕಿರು ನಗುಗಳಿಗಿಂತ ಈ ನಿರಾಶೆಯ ಬೃಹತ ಬವಣೆಗಳನ್ನೆ ನೀಡುತ್ತ ಬಂದ ನಿನಗೆ ನಾನು ತೊಡೆತಟ್ಟಿ ನಿಂತು ನಾನು ನಿನ್ನ ಮುಂದೆ ಹೋರಾಡಲು ಕಾರಣ??ನನ್ನ ಜನನ ಮತ್ತು ಮರಣದ ನಡುವಿನ ಅಂತರವ ಬೆಸೆಯುವ ನಿನ್ನ ಸುಂದರವಾಗಿಡಬೇಕೆನ್ನುವ ಒಂದೇ ಒಂದು ಮಹದಾಸೆಯಿಂದ.

       ನಿನ್ನ ನಿರ್ಮಾಣದ ಹಾದಿಯಲ್ಲಿಯೆ ಕಾಲ ಸೆವೆಸಿ ಕಾಲನ ಗರ್ಭ ಸೆರುವ ನಾವು, ಇಜ್ಜೋಡಿನ ಕವಲಾತಿ ಕವಲು ದಾರಿಯಲಿ ಪಯಣಿಸುತ್ತೆವೆ. ಕಡಿದಾದ ಮಸನದ ಕಾಳ ಕಂಧಕದಲ್ಲು ಮುನ್ನುಗ್ಗುತ್ತೆವೆ ನಿನ್ನ ಕನಸಿನ ಕುದುರೆಯನೇರಿ. ಮಾತು, ಮೌನ, ಬಿಂಕು, ಬಿಗುಮಾನದಲ್ಲಿ ಬೀಗುತ್ತೇವೆ ಭವಿಷ್ಯದ ನಿನ್ನ ವಾಸ್ತವ ನೆನೆದು.

       ಒಂದು ಸುಂದರ ಬದುಕು ನಿನ್ನದಾಗಲಿ ಎಂದು ಸದಾ ಸಹೃದಯರು ಅವರವರ ಪ್ರೀತಿ ಪಾತ್ರದಾರರಿಗೆ ಅಭಿನಂದಿಸುವದನ್ನು ನೋಡಿದಾಗಲೆಲ್ಲ ನಿನ್ನ ಅಸ್ತಿತ್ವದ ಅರಿವು ಮನದಟ್ಟಾಗುತ್ತದೆ. ಏನೋ ಒಂದು ಜೀವನ ಬಿಡು, ಇಂದು ಇದ್ದು ನಾಳೆ  ಸಾಯೋ ನಾವು ಹೇಗೋ ಆ ಭಗವಂತ ಮಡಿಗಿದ ಹಾಗೆ ಇದ್ದು ಹೋಗೋಣ ಎಂಬ ಅಸಡ್ಡೆಯ ಮಾತು ಕೇಳಿದಾಗಲೆಲ್ಲ ಮರುಕ ಎನಿಸುತ್ತದೆ.ಸಿರಿತನ, ಬಡತನ ,ಸಂಘರ್ಷ,ಉದಾಸೀನ,ಏಕಾಂಗಿ ಹೀಗೆ ಹಲವಾರು ರೂಪಗಳಲಿ ನಮ್ಮೀ ಜೀವನದಲ್ಲಿ ಮೇಳೈಸುವ ನೀನು ನಮ್ಮ ಜೀವಿತದ ದೊರೆ.ಒಂದು ಮಾತು ಬದುಕೇ..!!! ನೀನು ಹೇಗೆ ಇದ್ದರು ಸರಿ, ಆದರೆ ನಿನ್ನನು ನೀ ಇರುವ ರೂಪದಲ್ಲಿಯೆ ನಿನ್ನ ಒಪ್ಪಿ-ಅಪ್ಪಿಕೊಳ್ಳುವ ಔಧಾರ್ಯ ಮನೋಭಾವ ನಮಗೆ ಕರುನಿಸು….!!! ಹುಟ್ಟುಮನೆಯಿಂದ ಸಾವುಮರುಕ ಮನೆವರೆಗೂ ಚೂರು ನೆಮ್ಮದಿಯ ಕರುನಿಸು..!!!

                                                                                        ಇಂತಿ ನಿನ್ನ...ಸಿ.ಎಸ್.ಮಠಪತಿ