Tuesday 16 October 2012

ಹೀಗೊಂದು ಹನುಮ ಓಕುಳಿ...


ಇದು, ಹತ್ತೊಂಬತ್ತು ನೂರ ತೊಂಬತ್ತರ ದಶಕದ ಪ್ರತೀಕನ ಶಾಲಾ ದಿನಗಳಲಿ ಸಂಭವಿಸಿದಂತಹ ಘಟನೆ.ಪ್ರತೀಕನು ಸರಿ ಸುಮಾರು ನಿರಂತರ ನಾಲ್ಕು ವರ್ಷ ನೋಡಿ ಅದರ ಜಾಡುವ ಹಿಡಿದು ಸಾಗಿ,ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಂಡಂತಹ ದೃಶ್ಶ ಅದು."ಮತಿಪುರ" ಎಂಬ ಉತ್ತರ ಕರ್ಣಾಟಕದಲಿ ಬರುವಂತಹ ಪುಟ್ಟ ಹಳ್ಳಿ ಅದಾಗಿತ್ತು, ನಾಲ್ಕು ಕಡೆಗಳಿಂದ ಬೆಟ್ಟ-ಗುಡ್ಡಗಳ ದಟ್ಟ ಅರಣ್ಯದ ನಡುವೆ ತನ್ನ ದೇಹವನ್ನು ಹರಡಿಕೊಂಡಿತ್ತು.ಪ್ರತೀಕನು ಆ ಗ್ರಾಮದ ರಹವಾಸಿಯಾಗಿದ್ದ. ಗ್ರಾಮ, ಜನ ಜೀವನವೆಂದರೆ ಅಲ್ಲಿ, ಜಾತ್ರೆ, ದಿಬ್ಬಣ,ಆಚರಣೆ, ಅನುಕರಣೆ ಒಂದೇ, ಎರಡೇ. ತೀಕ್ಷ್ಣವಾಗಿ ಇಣುಕುತ್ತಾ ಹೋದರೆ ಅದೊಂದು ದೊಡ್ಡ ಪರ್ವತವಾಗಿ ಬೆಳೆದು ಬಿಡುತ್ತದೆ.ಪ್ರತಿ ವರ್ಷ ಬಿಸಿಲುಗಾಲದಲಿ ಬಿಳಿ ಜೋಳ, ಕಡಲೆ, ಗೋದಿ,ಕುಸುಬೆಗಳ ಸುಗ್ಗಿಯು ಮುಗಿದನಂತರ ಉತ್ತರ ಕರ್ಣಾಟಕದ ಪ್ರಾಯಶಃ ಎಲ್ಲ ಗ್ರಾಮಗಳಲು ಆಚರಿಸುವಂತಹ ಹಲವಾರು ಆಚರಣೆಗಳು ರೆಕ್ಕೆ-ಪುಕ್ಕ ಗರಿಗೆದರಿಸಿಕೊಂಡು ಹಾರಲಾರಂಭಿಸುತ್ತವೆ. ಸರ್ವೇ ಸಾಮಾನ್ಯವಾಗಿ ಅವು ಹೇರಳವಾಗಿ ನೆರವೇರುವದು ಏಪ್ರಿಲ್ ಮತ್ತು ಮೇ ಮಾಸಗಳಲಿ ಅಂದುಕೊಳ್ಳಿ.

ಆ ಮತಿಪುರ ಎಂಬ ಪುಟ್ಟ ಹಳ್ಳಿಯಲಿ ,ಒಬ್ಬರನೊಬ್ಬರು ಅತ್ಯಂತಹ ಹತ್ತಿರದಿಂದದ ನಂಟಿನೊಂದಿಗೆ ಅಣ್ಣ-ತಮ್ಮ, ಕಾಕ-ದೊಡ್ಡಪ್ಪ, ಅಳಿಯಾ-ಮಾವ ಹೀಗೆ ಸಂಭೋದಿಸುತ್ತಾ ಬದುಕು ಸಾಗಿಸುತ್ತಾ ಇದ್ದರು. ಆ ಹಳ್ಳಿಯ ಮಧ್ಯಮ ಮತ್ತು ಒಂದಿಷ್ಟು ಕೆಳ ವರ್ಗ ಎಂದು ಗುರುತಿಸಲ್ಪಟ್ಟ ಸಮುದಾಯದ ಮುಗ್ಧ ಜನರಲ್ಲಿ ಆಗಾಧವಾದ “ನಾವೇಲ್ಲ ಒಂದು” ಎಂಬ ನಿಲುವು ಮನೆಮಾಡಿತ್ತು.ಈ ನಿಲುವಿಗೆ ಸ್ವಲ್ಪ ಪ್ರಾಯೋಗಿಕ ವಿಚಾರವಂತ ಹುಡುಗ ಪ್ರತೀಕನಾಗಿದ್ದರಿಂದ, ಆ ಒಗ್ಗಟ್ಟಿನ ಮನೋಭಾವಕ್ಕೆ ಅವನ ಜೈಕಾರವಿತ್ತು. ಈ ನಿಲುವಿನಿಂದ ಏನನ್ನಾದರು ಮಾಡಬಹುದು ಬಿಡು ಎಂದು ತನ್ನದೆಯಾದ ಗೆಳೆಯರ ತಂಡದ ಮುಂದೆ ಜಂಭಕೊಚ್ಚಿಕೊಳ್ಳುತ್ತಿದ್ದೆ. 

ಹೀಗಿರುವಾಗ ಪ್ರತಿ ವರ್ಷದ ಬಿಸಿಲುಗಾಲ ಬಂತೆಂದರೆ ಸಾಕು ಅವನ ಮನಸು ಕುದಿಯುವ ಕುಲುಮೆಯಾಗಿಬಿಡುತ್ತಿತ್ತು.ಅದಕ್ಕೆ ಕಾರಣವೇ ಆಜನ್ಮ ಬ್ರಹ್ಮಚಾರಿ ರಾಮಬಂಟ “ಹುನುಮ” ಜಾತ್ರೆ.ಕಾಣದೇ ಜೀವಸಂಕುಲದ ಹುಟ್ಟು ಮತ್ತು ವಾಸ್ತವ್ಯಕೆ ಕಾರಣವಾಗುವ  ಆಗಾಧವಾದ ಶಕ್ತಿಗೆ ನಾವು ದೇವರೆಂದು ನಂಬಿ, ಅದಕ್ಕೆ ಕಲ್ಪನಾ ರೂಪವ ಕೊಟ್ಟು, ಗುಡಿಯ ಕಟ್ಟಿತ್ತೇವೆ. ಮತ್ತೆ ಅದೇ ದೇವರ ಹೆಸರಿನಲಿ ಹಲವಾರು ಪಾಪಕಾರ್ಯಗಳಲಿ ಭಾಗಿಯಾಗುತ್ತೇವೆ. ಧೂಪ-ಮಂಗಳರಾತಿಯ ಮಾಡಿ ಪಾಪಕೆ ಅದೇ ದೇವರಿಂದ ಪರಿಹಾರ ಬೇಡುತ್ತೇವೆ. ಇಂತಹ ಜನ ಜೀವನದ  ಆಗು ಹೋಗುಗಳ ನಡುವೆ ನಮ್ಮ "ಮತಿಪುರ"ದಲಿ ಪ್ರತಿವರ್ಷವು ಮಹಾಮಾರುತಿಯ ಹೆಸರಲಿ ನೀರೋಕುಳಿ ನಡೆಯುತ್ತಿತ್ತು .

ಸತತ ಮೂರು ವರ್ಷದಿಂದ ಅದೇ ಹನುಮ ಜಾತ್ರೆಯಲಿ ನಡೆಯುವಂತ ಓಕುಳಿಯ ದೃಶ್ಯವನು ನೋಡಿದ ಪ್ರತೀಕನ ಮನಸ್ಸು ತೀವ್ರವಾದ ಮರುಕನು ನುಡಿದಿತ್ತು. ಆ ನಾಲ್ಕನೆಯ ವರುಷದ ಜಾತ್ರೆಯ ಮುಂದಿನ ದಿನಗಳಲಿ ಅವನ ಚೆಡ್ಡಿ ಗೆಳೆಯರ ಮುಂದೆ ತನ್ನ ನೋವನ್ನು ತೋಡಿಕೊಂಡಿದ್ದ. ಆ ಊರಿನಲ್ಲಿ ಎಲ್ಲರು ಕೆಟ್ಟವರಾಗಿರಲಿಲ್ಲ,ಕೆಲವಾರು ಕೊಳೆತ ಹಣ್ಣಿನಂತಹ ವ್ಯಕ್ತತ್ವಗಳು ತನ್ನ ಸೊಂಕನು ಮತ್ತಷ್ಟು ಜನರಿಗೆ ಪಸರಿಸಿ ತಮ್ಮ ತೂಕವನು ಹೆಚ್ಚಿಸಿಕೊಂಡಿದ್ದವು.ಪ್ರತೀಕನ ಅನುಭವದ ಪ್ರಕಾರ ಕಟ್ಟಲು ಕನ್ನಿ, ಹಿಡಿಯಲು ಹಗ್ಗ, ಜೀವನಕೆ ಲಂಗುಲಗಾಮು ಇಲ್ಲದ ಪೊರಕೆ ಹಿಡಿಯಲು ಲಾಯಕ್ ಆದ ಜೀವಗಳೇ ಸಮುದಾಯ, ಊರು,ಕೇರಿ, ನಾಡನ್ನು ಆಳಲು ಕೈಗಳಲಿ ಲೇಖನಿಯನು ಹಿಡಿದು ಮುಂದೆ ಬರುತ್ತವೆ. ಅದರ ಹಿಂದೆ ಹಣ, ಅಶ್ವರ್ಯ, ಪುಂಡಾಟಿಕೆ, ದುರಹಂಕಾರ, ಕಸಿದು ತಿನ್ನುವ ಅಮಾವಿಯ ಮನೋಪ್ರವೃತ್ತಿಯೇ ಪ್ರಮುಖ ಅಸ್ತ್ರ ಎಂದರೂ ತಪ್ಪಾಗಲಾರದು.

ಹೀಗಿರುವಾಗ ಧುತ್ತೆಂದು ಹನುಮಜಾತ್ರೆ ಬಂದೆ ಬಿಟ್ಟಿತು. ಹಸಿದ ಕಳ್ಳ ಬೆಕ್ಕಿನಂತೆ ವರ್ಷವೆಲ್ಲ ಹೊಂಚ್ಹಾಕಿ ಕಾಯುತ್ತಿದ್ದ ಆ ಪುಂಡರ ಗುಂಪು ಬಡವ ಬಲ್ಲಿದನೆನ್ನದೆ ಕಡಾ-ಖಂಡಿತವಾಗಿಯು ಎಲ್ಲರು ಇಂತಿಷ್ಟು ಚೆಂದಾ ನೀಡಬೇಕೆಂದು ಊರಿನ “ಹೂಗಾರ”ಯ್ಯನಿಗೆ ಹೇಳಿ ಡಂಗುರ ಸಾರಿಸುತ್ತಿದ್ದರು.ಹಳ್ಳಿಯ ಜನರು ಕೂಡ ಹಿಂದೆ ಮುಂದೆ ಯೋಚಿಸದೆ ದೇವರ ಕೆಲಸಕ್ಕಲ್ಲವೇ ಅಂದುಕೊಂಡು ಚೆಂದಾ ಕೊಡುತ್ತಿದ್ದರು.ಜಾತ್ರಾ ಆಯೋಜನ ಉಸ್ತುವಾರಿಯನ್ನು ಊರಿನ ಗೌಡನ ಮಗ, ಪುಂಡ ಹಳ್ಳಿಯ ರಾಜಕೀಯ ನಂಟಿರುವವರ ಎಂಟಾರು ಮಕ್ಕಳು ನೋಡಿಕೊಳ್ಳುತ್ತಿದ್ದರು. ಅವರೆಲ್ಲ ಮೂವತ್ತರ ಮೇಲೆ ಮತ್ತು ನಲವತ್ತರ ಒಳಗಿನವರು.ತನ್ನದೆಯಾದ ಒಂದು ಗುಂಪನ್ನು ಕಟ್ಟಿಕೊಂಡು ದೊಡ್ಡಾಲದ ಮರದ ಕೆಳಗೆ ಕುಳಿತು ಪಂಚಾಯಿತಿ ಮಾಡುವ ಚಾಳಿಯನ್ನು ಪ್ರತೀಕನು ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಸಿಕೊಂಡಿದ್ದ.ಅಂದೊಂದು ದಿನ "ಪ್ರತೀಕ" ತನ್ನ ಬಾಲಪರಿವಾರವನು ಕರೆದು ಹೇಳಿದೆ..ನೋಡಿ, ಪ್ರತಿವರ್ಷದಂತೆ ಈ ವರ್ಷವು ಹನುಮ ಜಾತ್ರೆ ಬಂದಿದೆ, ನಾವು ಈ ದೇವರ ಹೆಸರಲ್ಲಿ ಏನಲ್ಲ ಅಪರಾಧಗಳು ಈ ಆಯೋಜಕ ಪುಂಡರಿಂದ ನಡೆಯುತ್ತವೆ ಎಂದು ಕಂಡುಹಿಡಿಯೋಣ ಎಂದ. ಎಲ್ಲರು ಮೌನದಲ್ಲಿಯೇ ತಮ್ಮ ಸಮ್ಮತಿಯನು ಸೂಚಿಸಿದರು.ಪ್ರತೀಕನು ಊರ "ಬೀರೇಶ್ವರ" ದೇವರ ಪೂಜಾರಿಯ ಮಗ ಆಗಿದ್ದುದರಿಂದ ಎಲ್ಲ ಕಡೆಯು ಓಡಾಡುನ ಸ್ವತಂತ್ರ ಅವನಿಗಿತ್ತು.ಹೀಗಿರುವಾಗ ಪ್ರತಿವರ್ಷದ ಜಾತ್ರೆಯಲಿ ಎರಡು, ಮೂರು ಮಧ್ಯಮ ವಯಸ್ಸಿನ ಮಹಿಳೆಯರನ್ನು ಕರೆತಂದು ಹನುಮ ದೇವನ ಗುಡಿಯ ಮುಂದಿನ ತುಂಬಿದ ಹೊಂಡದಿಂದ ನೀರನ್ನು ಎರ್ರಾ-ಬಿರ್ರಿಯಾಗಿ ಎರಚುತ್ತಿದ್ದರು.ಅದಕ್ಕೆ "ವೀರರ ನೀರೋಕುಳಿ" ಎಂಬ ಹೆಸರಿನ ಪಟ್ಟವನ್ನು ಕಟ್ಟಿದ್ದರು. ಅದು ಒಂದು ಧಾರ್ಮಿಕ ಮಾನವಿಯ ನೆಲಗಟ್ಟಿನ ಮೇಲೆ ನಿಂತಿದ್ದರೆ ಪ್ರತೀಕನ ಮನಸು ನೀರು ಉಗಿಸಿಕೊಳ್ಳುವ ಮಹಿಳೆಯರ ಬಗ್ಗೆ ಅಷ್ಟೊಂದು ಮಿಡಿಯುತ್ತಿರಲಿಲ್ಲ. ಆದರೆ ನೀರು ಉಗಿಯುವಾಗಲೆಲ್ಲ ಊರಿನ ಆ ಪುಂಡ ಪೋಕರಿ ಹುಡುಗರೆಲ್ಲ ಕಟಿ ಬದ್ಧ ವೈರಿಯನ್ನು ದಂಡಿಸುವಾಗ ಹೇಗೆ ಮನುಷ್ಯ ವಿಕಟವಾಗಿ ನಕ್ಕು ತನ್ನ ಕ್ರೌರ್ಯವನ್ನು ಮೆರೆಯುತ್ತಾನೋ ಹಾಗೆ ನಡೆದುಕೊಳ್ಳುತ್ತಿದ್ದರು.

ಈ ವರ್ಷ ಹೇಗಾದರು ಮಾಡಿ ಈ ಅನಿಷ್ಠ ಪದ್ಧತಿ ನಿಂತು ಹೋದರೆ ಸಾಕಪ್ಪ ಅಂತ ಆ ಹುಡುಗರೆಲ್ಲ ಅಂದುಕೊಂಡಿದ್ದರು. ಅದೇ ಆ ವರ್ಷದ ಜಾತ್ರಾ ಯೋಜನೆಯ ತಿರುಳುಗಳನ್ನೆಲ್ಲ ಅರಿಯಲು ಬಾಲಪರಿವಾರದ ಪರವಾಗಿ ಪ್ರತೀಕನು ಕಾರ್ಯಾಚರಣೆಗೆ ಇಳಿದ. ಅವನು ಆ ಪುಂಡರ ಚಕ್ರವ್ಯೂಹವನ್ನು ಬೇಧಿಸಿದೆ. ಅಂದು ಶನಿವಾರ ಓಕುಳಿಯ ಹೊಂಡದ ಪೂಜೆ ಇತ್ತು, ಅವತ್ತು ಹೊಂಡಕ್ಕೆ ಪೂಜೆ ಸಲ್ಲಿಸಿ, ಮುಂದಿನ ಬರುವ ಮಂಗಳವಾರ ಮತ್ತು ಬುಧುವಾರ ನಿಯಮಿತವಾಗಿ ಎರಡು ದಿನ ಓಕುಳಿಯನು ಏರ್ಪಡಿಸುತ್ತಿದ್ದರು. ಪೂಜೆ ಮುಗಿಸಿ ಸರಿಸುಮಾರು ರಾತ್ರಿ ಎಂಟು ಗಂಟೆಗೆ ಊರಿನ ಗೌಡರ ಛಾವಡಿಯಲಿ ಸಭೆಯನ್ನು ಕರೆಯಲಾಗಿತ್ತು. ಆ ಸಭೆಗೆ ಕೇವಲ ನಿಯಮಿತ ಜನರನ್ನು ಮಾತ್ರ ಕರೆಯಲಾಗಿತ್ತು.ಅವರೆಲ್ಲರು ಒಂದೇ ಗಾಡಿಯ ಪಯಣಿಗರು. ಒಕ್ಕರಲಿನ ನಿರ್ಧಾರವನು ತೆಗೆದುಕೊಳ್ಳುವದರಲ್ಲಿ ನಿಸ್ಸೀಮರು.ಪ್ರತೀಕನು ಸಹ ಆ ಗುಂಪನು ಸೇರಿಕೊಂಡ. ಒಮ್ಮೆ ಅವರೆಲ್ಲರು ಹುಡುಗನನ್ನು ದುರುಗುಟ್ಟಿ ನೋಡಿದರು. ಬಾಗಿಲ ಸುಳಕಿನಲಿ ಚೌಕಟ್ಟನ್ನು ಹಿಡಿದು ವೈಯ್ಯಾರದಿಂದ ನಿಂತಿದ್ದ  ಗೌಡನ ಹೆಂಡತಿ, ಅಯ್ಯೋ ಅವನನ್ನೇನು ನೋಡುತ್ತೀರಿ ಬಿಡಿ ಚಿಕ್ಕ ಹುಡುಗ !ನಿಮ್ಮ ಸಭೆಯನ್ನು ಮುಂದುವರಿಸಿ ಎಂದಳು. ಗೌಡತಿಯ ಈ ಮಾತು ಕೇಳಿದ ಮುದಿಗೌಡನಿಗೆ ಯವ್ವನ ತೂರಿ ಬಂತೇನೋ. ತಕ್ಷಣ ತನ್ನ ಮಾತನ್ನು ಶುರುವಿಟ್ಟುಕೊಂಡ.

ನೋಡಿ, ಪ್ರತಿವರ್ಷದಂತೆ ಈ ವರ್ಷವು ನಮ್ಮ ಅಣತಿಯಂತೆ ಜಾತ್ರೆ ನಡೆಯಬೇಕು. ಎಲ್ಲ ಲೆಕ್ಕ ಪತ್ರಗಳು ನಮ್ಮಂತೆಯೇ ತಯಾರಗೊಂಡು ಊರ ಅಗಸಿಯ ಬಾಗಿಲಿಗೆ ಅಂಟಿಸಬೇಕು. ಅದಿರಲಿ, ಖರ್ಚು ವೆಚ್ಚದ ಲೆಕ್ಕವ ಮುಂದೆ ನೋಡಿದರಾಯ್ತು., ಪೆನ್ನು ಹಾಳೆ ನಮ್ಮ ಕೈಯಲ್ಲಿರುವಾಗ ನಮಗೇಕೆ ಭಯ ಎಂದ, ಹುರಿ ಮೀಸೆಯ ತಿರುವುತ್ತ ಮುದಿಗೌಡ. ಆ ಕಡೆಯಿಂದ ಕೀರಲು ದನಿಯಲಿ ಊರಿನ ರಾಜಕೀಯ ಮುಖಂಡನ ಮಗ "ರಾಜಪ್ಪ" ಗೌಡ್ರೆ, ಜನರ ದುಡ್ಡಿಗೆ ಕತ್ತರಿ ಹಾಕೋದು ಒಂದು ಕಡೆಯಿರಲಿ, ಮೊದಲು ನಮ್ಮ ಮುಂದೆ ಇರೋ ದೊಡ್ಡ ಸವಾಲಂದ್ರೆ ಜೈ ಹನುಮಾನನ ಓಕುಳಿಗೆ ಮೊದಲೇ ಸರಕಾರ  ವಿರೋಧ ವ್ಯಕ್ತಪಡಿಸುತ್ತಿದೆ, ಅಂಥವುದರಲ್ಲಿ ಈ ವರ್ಷ ಹೇಗೆ ಮಾಡೋದು, ಓಕುಳಿಗೆ ಯಾರನ್ನು ಕರೆತರುವುದು, ನಮ್ಮ ಹುಡುಗರು ಆಡುತ್ತಿರುವ ನಾಟಕಕ್ಕೆ ಯಾವ ಹುಡುಗಿಯರನ್ನು ಕರೆಸುವುದು ಒಂದು ತಿಳಿಯುತ್ತಿಲ್ಲ ಎಂದ. ಅಷ್ಟರಲ್ಲಿ ಮತ್ತೆ ಅದೇ ಗೌಡನ ಬಾಯ ಬಡಕಿ  ಹೆಂಡತಿ ಮಧ್ಯ ಬಾಯಿ ಹಾಕಿ. ಅಯ್ಯೋ ! ಅದಕ್ಕೆ ಅಷ್ಟೊಂದು ಯಾಕೇ ತಲೆಕೆಡಿಸಿಕೊಳ್ಳುತ್ತೀರಿ ಈ ವರ್ಷ ಓಕುಳಿಯಲಿ ನೀರು ಉಗಿಸಿಕೊಳ್ಳಲು ಯಾರು ಬರದಿದ್ದರೆ ಏನಂತೆ ? ನಮ್ಮೂರಿನ ದಲಿತರ ಒಂದೆರಡು ಹೆಂಗಸರನ್ನು ಕರೆತನ್ನಿ ಎಂದಳು. ಈ ಮಾತಿಗೆ ಮತ್ತೊಬ್ಬ ಪುಂಡ "ಯತಿ" ಅಮ್ಮಾವ್ರೆ, ನೀವು ಹೇಳಿದ ಮಾತು ಸತ್ಯ ಬಿಡಿ, ನಮ್ಮ ಗೌಡರು ಹೇಳಿದ ಮಾತಿಗೆ ನಮ್ಮೂರಿನ ದಲಿತರು ನಡೆದುಕೊಳ್ಳದೆ ಇರುತ್ತಾರೆಯೇ ಎಂದ. ಮತ್ತೇ ಅಮ್ಮಾವ್ರೆ ನಾವಾಡೋ ನಾಟಕಕ್ಕೆ ಹುಡುಗಿಯರನ್ನು ಎಲ್ಲಿಂದ ಕರೆತರುವದು ಎಂದ ಯತಿ? ಗೌಡತಿ..ಅಯ್ಯೋ ಗೌಡ್ರೆ ಹೇಳಿ ಈ ಮುಂಡೆ ಮಗಗೆ, ಅದೇ ನಮ್ಮೂರಿನ ದಲಿತರ ಮನೆಯ ಎರಡಲ್ಲ ಹತ್ತು ಹುಡುಗಿರನ್ನು ಕರೆತರುತ್ತೇನೆಂದು ಎಂದಳು. ಈ ಭಂಡತನದ ಅಹಂಕಾರಿಕ ಮಾತು ಕೇಳಿ ಅಲ್ಲೆ ಮೂಲೆಯಲಿ ಮುದುಡಿಕೊಂಡು ಕುಳಿತಿದ್ದ ಪ್ರತೀಕನ ರಕ್ತ ಕುದಿದು ಹೊಯ್ತು. ಆ ಸಭೆಯಲಿ ತೆಗೆದುಕೊಂಡ ನಿರ್ಧಾರದಂತೆ ಮತ್ತು ಅವರ ಅಣತಿಯಂತೆ ಎಲ್ಲವು ನೆರವೇರಿತು. ಓಕುಳಿಯ ನೀರು ಉಗಿಸಿಕೊಳ್ಳಲು ದಲಿತ ಮಹಿಳೆಯರು “ದಾಮತಿ”ಯರಾಗಿ ಬಂದರು. ಪುಂಡ ಪೋಕರಿಗಳು ಆಡುವ ರಂಗಿನ ರಾತ್ರಿ ಸಾಮಾಜಿಕ ನಾಟಕಕೆ ಅವರ ನೆಂಟರಿಷ್ಟರ ಹರೆಯ ವಯೋಮಾನದ ಹುಡುಗಿಯರು ಬಂದರು.

"ದೊಡ್ಡವರ ಮನೆಯಲ್ಲಿ ಹಾದರ ಹೇರಳ, ಬಡವರ ಮನೆಯಲ್ಲಿ ಅಭಿಮಾನದ ಬದುಕು ಬಹಳ" ಎನ್ನುವುದನ್ನು ಬಡತನದ ಬದುಕಿನಿಂದ ಪ್ರತೀಕನು ಕಂಡುಕೊಂಡಿದ್ದ. ಅದರಂತೆ ಓಕುಳಿಯು ನೆರವೇರಿತು, ಪಾಪ  ಮುಗ್ಧ ಜನರ ಮೇಲೆ ಹುಲಿಯಂತೆ ಪುಂಡಪೋಕರಿಗಳು ನೀರು ಎರಚುತ್ತಿದ್ದರೆ, ಆ ಪುಂಡಪೋಕರಿಗಳ ಹೆಂಡತಿಯರು ನೋಡು ಅಲ್ಲಿ ನನ್ನ ಗಂಡ ಹೇಗೆ ನೀರಿನ ಜೋಳಿಗೆಯ ಜತೆಯಲಿ ಹುಲಿಯಂತೆ ನುಗ್ಗುತ್ತಿದ್ದಾನೆ ಅಂತ ಮಾತನಾಡಿಕೊಳ್ಳುತ್ತಿದ್ದರು. ಪಾಪ ದೇವರ ಹೆಸರಲ್ಲಿ ಊರಿನಲಿ ಕೆಳವರ್ಗದ ಜನ ಅಂಥ ಆವಾಗ-ಇವಾಗ ಅವರ ಮೇಲೆ ಸಾಮಾಜಿಕ ದಾಳಿನಡೆಯುತ್ತಿದ್ದನ್ನು ಕಣ್ಣಾರೆ ನೋಡುತ್ತ ಮಧ್ಯಮ ವರ್ಗದ ಆ ಬಾಲಕರು ಒಂದು ಕಡೆ ನಿಂತುಕೊಂಡು ಮರುಗುತ್ತಿದ್ದರೆ, ಎಲ್ಲರು ಜಾತ್ರೆಯಲಿ ಸಿಳ್ಳೆ-ಕೇಕೆ ಹಾಕುತ್ತ ಕುಣಿಯುತ್ತಿದ್ದರು. ಜಾತ್ರೆ ಮುಗಿದ ನಂತರ ತನ್ನೆಲ್ಲ ಚೆಡ್ಡಿ ಗೆಳೆಯರ ಜತೆಗೂಡಿ ಅಳಲನ್ನು ಹಂಚಿಕೊಂಡನು ಪ್ರತೀಕ.ಇದೇ ದಾರಿಯಲಿ ಸಮಾಜದ ಹಲವಾರು ಅಹಿತಕರ ಅನುಭವಗಳನ್ನು ನೋಡುತ್ತಲೆ ತನ್ನ ಗೆಳೆಯರೊಂದಿಗೆ ಹಂಚಿಕೊಳ್ಳುವ ಹವ್ಯಾಸ ಚಟವಾಗಿ ಹೊಯ್ತು ಪ್ರತೀಕನಿಗೆ. ಹೊಟ್ಟೆಯಲಿನ ಸಿಟ್ಟು ಬಲವಿರದ ರೆಟ್ಟೆಗೆ ಬರದೆ ಗರ್ಭದಲ್ಲಿಯೇ ಸ್ರಾವವಾಗಿ ಹರಿದುಹೊಯ್ತು. ಅವತ್ತಿನ ಹನುಮದೇವರ ಗುಡಿಯ ಮುಂದಿನ ಓಕುಳಿ ಮತ್ತು ರಾತ್ರಿಯಲಿ ನಡೆದ ಆ ಪುಂಡರ ನಾಟಕದಲಿ, ಪಾಪ ಏನು ಅರಿಯದ ಮುಗ್ಧ ದಲಿತ ಮಹಿಳೆಯರು ಜನರ ಮನರಂಜನೆಯ ಕೈಗೊಂಬೆಗಳಾಗಿ ಹೋದರು. ಧನಿಕ ದೌರ್ಜನ್ಯಕೆ ಬಡತನದ ಬಾಳುಗಳು ಆಟಿಕೆಯ ವಸ್ತುಗಳಾಗಿ ಹೋದವು. ಅಂಧಾಚರಣೆಗಳ ಒಳ ತಿರುಳುಗಳನು ಅರಿಯದ ಹಳ್ಳಿಗರ ಸಮುದಾಯ ಮೂಕ ಪ್ರೇಕ್ಷಕ ವೃಂದವಾಗಿ ಹೋಯ್ತು..…!! ಕಾಲಾಯ ತಸ್ಮಯ ನಮಃ…
ಸಿ.ಎಸ್.ಮಠಪತಿ

Monday 15 October 2012

ಅಮ್ಮಗೆ ನುಡಿ ನಮನ

ಕಣ್ಣಿಗೆ ಕಾಣುವ ಕನ್ನಡ
ಪದಗಳೆಲ್ಲ ಸೆಳೆದು
ಒಳ ಎಳೆದು ಮನವ
ಸುತ್ತಾಡಿಸುತ್ತವೆ
ತನ್ನ ಹಾದಿ-ಬೀದಿ
ಪ್ರಾಂಗಣದಲ್ಲೆಲ್ಲ,
ಸುತ್ತಿ-ಸುಳಿದಾಡಿ ಅಲ್ಲಲ್ಲಿ
ನಕ್ಕು-ಬಿಕ್ಕುತ ಮುಂದೆ ಹೋಗುತ್ತೇನೆ
ಒಮ್ಮೊಮ್ಮೆ  ಬಿರಿವ ಭಾವಕೆ
ಸೋತು ಅಳುತ್ತೇನೆ.

ಏಕಾಂಗಿ ಎಂಬ ಒಂಟಿತನದ ಕೂಗಿಗೆ
ಮತ್ತೇ ಜಂಟಿಯಾಗುತ್ತಾಳೆ ಕನ್ನಡಮ್ಮ
ಬರೆವ ಗೀಳು ಬರೆಯುತ್ತೇನೆ,
ಒಳಗೊಳಗೆ ಕಳೆದ್ಹೋಗಿ
ಕೊರಳು ಉಮ್ಮಳಿಸಿಕೊಂಡು
ಹಾಗೆ ಸುಮ್ಮನೆ 
ಭಾವ ಲಹರಿಯ ಮೊಳಗಿಸುತ್ತೇನೆ.

ನಿದಿರೆ ಬಾರದ ಕಣ್ಣುಗಳ
ರೆಪ್ಪೆಯ ಒತ್ತಿ ಕಂಗಳ
ಕದವ ಮುಚ್ಚಲು ಹವಣಿಸುತ್ತೇನೆ
ಕತ್ತಲ ಕೋಣೆಯ
ಮೆತ್ತನೆಯ ಹಾಸಿಗೆಯಲಿ
ಮುದುಡಿಕೊಂಡು,
ಹಾಗೆ ಅವರ ಇವರ
ಜಗದೆಲ್ಲ ಮುಖಗಳು ಇಣುಕಿ
ದಾಳಿಗೆ ಇಳಿಯುತ್ತವೆ,
ಮತ್ತೆ ಮನದಲಿ ಅಮ್ಮ ಕನ್ನಡಮ್ಮ
ನರ್ತಿಸಿ ಜೋಗುಳ ಗೀತೆ ಹಾಡುತ್ತಾಳೆ
ನಿದಿರೆ ಉದರಕೆ ಜಾರಿ
ಜಗವ ಮರೆಯುತ್ತೇನೆ..
ಎಚ್ಚರಗೊಳ್ಳಲು ನಮಿಸಿ
ಧನ್ಯನಾಗುತ್ತೇನೆ....

ಸಿ.ಎಸ್.ಮಠಪತಿ