Monday 15 October 2012

ಅಮ್ಮಗೆ ನುಡಿ ನಮನ

ಕಣ್ಣಿಗೆ ಕಾಣುವ ಕನ್ನಡ
ಪದಗಳೆಲ್ಲ ಸೆಳೆದು
ಒಳ ಎಳೆದು ಮನವ
ಸುತ್ತಾಡಿಸುತ್ತವೆ
ತನ್ನ ಹಾದಿ-ಬೀದಿ
ಪ್ರಾಂಗಣದಲ್ಲೆಲ್ಲ,
ಸುತ್ತಿ-ಸುಳಿದಾಡಿ ಅಲ್ಲಲ್ಲಿ
ನಕ್ಕು-ಬಿಕ್ಕುತ ಮುಂದೆ ಹೋಗುತ್ತೇನೆ
ಒಮ್ಮೊಮ್ಮೆ  ಬಿರಿವ ಭಾವಕೆ
ಸೋತು ಅಳುತ್ತೇನೆ.

ಏಕಾಂಗಿ ಎಂಬ ಒಂಟಿತನದ ಕೂಗಿಗೆ
ಮತ್ತೇ ಜಂಟಿಯಾಗುತ್ತಾಳೆ ಕನ್ನಡಮ್ಮ
ಬರೆವ ಗೀಳು ಬರೆಯುತ್ತೇನೆ,
ಒಳಗೊಳಗೆ ಕಳೆದ್ಹೋಗಿ
ಕೊರಳು ಉಮ್ಮಳಿಸಿಕೊಂಡು
ಹಾಗೆ ಸುಮ್ಮನೆ 
ಭಾವ ಲಹರಿಯ ಮೊಳಗಿಸುತ್ತೇನೆ.

ನಿದಿರೆ ಬಾರದ ಕಣ್ಣುಗಳ
ರೆಪ್ಪೆಯ ಒತ್ತಿ ಕಂಗಳ
ಕದವ ಮುಚ್ಚಲು ಹವಣಿಸುತ್ತೇನೆ
ಕತ್ತಲ ಕೋಣೆಯ
ಮೆತ್ತನೆಯ ಹಾಸಿಗೆಯಲಿ
ಮುದುಡಿಕೊಂಡು,
ಹಾಗೆ ಅವರ ಇವರ
ಜಗದೆಲ್ಲ ಮುಖಗಳು ಇಣುಕಿ
ದಾಳಿಗೆ ಇಳಿಯುತ್ತವೆ,
ಮತ್ತೆ ಮನದಲಿ ಅಮ್ಮ ಕನ್ನಡಮ್ಮ
ನರ್ತಿಸಿ ಜೋಗುಳ ಗೀತೆ ಹಾಡುತ್ತಾಳೆ
ನಿದಿರೆ ಉದರಕೆ ಜಾರಿ
ಜಗವ ಮರೆಯುತ್ತೇನೆ..
ಎಚ್ಚರಗೊಳ್ಳಲು ನಮಿಸಿ
ಧನ್ಯನಾಗುತ್ತೇನೆ....

ಸಿ.ಎಸ್.ಮಠಪತಿ


No comments:

Post a Comment