Wednesday 28 November 2012

ಎದೆಯಾಳದ ಹನಿಗಳು ಭಾಗ-4



ಮುಪ್ಪು
ಎಷ್ಟು ದಿನ ಅಂತ
ಕದ್ದು ಮುಚ್ಚಿ
ಸವಿಯಲಿ
ಮುದ್ದು ನಲ್ಲೆ
ನಿನ್ನ ಚಂದವ.
ಇಂದಲ್ಲ ನಾಳೆ
ಮುದಿತನವು ಅಪ್ಪಿತೂ
ನಿನ್ನ, ಚೆಲುವಿಗಲ್ಲ; ನನ್ನ
ಕಳ್ಳ ನೋಟಕೆ.

ಅರ್ಥ
ನಾ ಬರೆವ
ಕವನದಲಿ
ಬರೀ ನೀನೆ.
ನೀ ಓದಿಕೊಂಡು
ಹೋಗಬೇಕು;
ಪದ-ಪದಕೂ
ಅರ್ಥವ ಕೇಳದೆ ..

ಕವನ

ಕಾಲ್ಪನಿಕ
ಕವನದಲ್ಲೊಬ್ಬಳು
ಚೆಲುವೆ
 ಇದ್ದಾಳೆ...
ಪದಗಳಿಗೆ
ಸಿಗದೆ
ರಾಗಕೆ
 ಒಲಿಯದೆ
ಕವನದೊಳು
ಕವನವಾಗಿ
ಅವಿತು
 ಕುಳಿತಿದ್ದಾಳೆ..

ಸಂಭ್ರಮ
ಅವನ
ಪ್ರೀತಿಯ
ತಂಗುದಾನದಲಿ
ಎಂದೊ
ಇಂಗಿ
 ಹೋಗಿದ್ದ
ಒಲವಿಗಿಂದು
ಮರು
 ಹುಟ್ಟಿನ
ಸಂಭ್ರಮ...

ಗುರಿ
ಗುರಿಗಳು
ನೂರಾರು
ಸಾಧಿಸೋಕೆ
ನಿಂತರೆ
ಮನಸಲಿ
ಹುಟ್ಟುವ
ಅಪಸ್ವರಗಳು
ಸಾವಿರಾರು..!!

ಅವಳು
ನನ್ನನ್ನು
ನಾ ಪ್ರೀತಿಸದೇ
ಅವಳಿಗೆ ಪ್ರೀತಿಸಿದೆ
ಅಂದಾಗ, ಅವಳು ನನ್ನನು
ದ್ವೇಷಿಸಿದ್ದು
ತಪ್ಪೇನಲ್ಲ...!!

ಜೀವನ
ಕ್ಷಣಿಕ ಜೀವನದಲಿ
ಸ್ನೇಹ ಅಮರವಾಗಿರಲಿ
ಅಮರ
 ಸ್ನೇಹದಲಿ
ನಮ್ಮ ಜೀವನ
ಹಸಿರಾಗಿರಲಿ...

ಜೀವನದಿ
ಜೀವನವೆಂಬೀ
ಜೀವನದಿಯ
ಒಂಟಿ ದೋಣಿ
ಜಂಟಿ
ಪಯಣಿಗರಾಗಿ
ಕುಲುಕುವ
ನಂಬುಗೆ
ಅಲೆಯ ಮೇಲೆ
ನಗುತ ಸ್ನೇಹ
ಬಂಧದಲಿ ಪಯಣಿಸೋಣ..!!

ಉಸುರು
ನಾನೊಂದು
ತೀರ
ನೀನೊಂದು
ತೀರ
ಎಂದು
ವಿರಹ ಗೀತೆ
ಹಾಡುವಾಗ
ತೀರವ
ಸೇರುವೆ ಎಂದು
ಉಸುರಲು
ಆಗಲೇ ಇಲ್ಲ.

ನೆನಪು
ಮರೆಯಲಾದಿತೆ
ಮರೆಯಲೆಂದು
ಮತ್ತೆ ಮತ್ತೆ
ನೆನೆವ
ಕಹಿ
ನೆನಪನು.

ಮನಸು
ಎಲ್ಲೆಂದರಲ್ಲಿ
ಸವಾರಿ
ಹೂಡುವ
ಮನಸಿಗೊಂದು
ಮೂಗುದಾರ ಹಾಕಬೇಕು.
  
ಉಡುಗೊರೆ
ಸುಂದರ
ಬೆಳಗಿಗೊಂದು
ಅಂದದ
ಉಡುಗೊರೆ, 
ನೀನಿಕ್ಕುವ
ಮುಂಬಾಗಿಲ
ರಂಗೋಲೆ...

ಮಲ್ಲಿಗೆ
ಮಲ್ಲಿಗೆ ಮಾರುವವಳ
ನೀಳ ಜಡೆಯಲಿ
ಮಲ್ಲಿಗೆ ಇಲ್ಲ, 
ನನ್ನವಳಿಗೆ
ಮುಡಿಸೋಣವೆಂದರೆ
ತಲೆಯಲಿ
ಚೋಟುದ್ದ ಜಡೆಯಿಲ್ಲ..

ಅಣಕು
ಹೂವಾಡಗಿತ್ತಿ
ಕಳ್ಳ ಮೊಳದಿ
ಮಲ್ಲಿಗೆಯ
ಅಳೆದು
ಕೊಡುವಾಗ
ಮಡದಿಯ
ತುಂಡು ಜುಟ್ಟು
ಅಣಕಿಸಿತ್ತು...

ಚೆಲುವು
ಅಭಿಮಾನದ 
ಅಲೆಯಲಿ
ಬೀಗುವಾಗ
 ಜಗತ್ತು
ಅತೀ ಸುಂದರವಾಗಿ
ಕಾಣುತ್ತೆ...

ಮುತ್ತು
ಕೊಟ್ಟ ಮುತ್ತಿಗೆ ಬಡ್ಡಿ
ಸಮೇತ ಕೇಳಿದಳು
ನಲ್ಲೆ.. ನಾನಂದೆ
ಈಗ ಕೇವಲ
ಬಡ್ಡಿ ಮಾತ್ರ ಕೊಡುವೆ
"
ಅಸಲು" ಹಾಗೆಯೇ 
ಇರಲೆಂದು..!!!

ದೀಪ
ಬಹುಶಃ
ದೀಪ ಉರಿಯುವುದು
ಬೆಳಕು ಸೂಸಲೆಂದಲ್ಲ,
ಮೈತಬ್ಬಿಕೊಂಡ
ಅಗ್ನಿಗೆ ಮುಕ್ತಿ ಒದಗಿಸಲೆಂದು.

ಮೋಡ.
ಮೋಡ ಕರಗಿತೆಂದು
ಮಳೆ ಹೊರಟೇ
ಹೋಯ್ತೆಂದುಕೊಳ್ಳುವುದು
ಕರಗುವ ಮೋಡದಷ್ಟೇ
ಅಲ್ಪಾಯುಷಿ ಭಾವ.

ಗೋರಿ
ನಾಳೆಯನ್ನು ಇವತ್ತು
ನೆನೆಯದೇ ಹೋದರೆ
ಇವತ್ತೆ ನಾವು
ನಾಳೆಯ ದಿನಕ್ಕೆ ಗೋರಿ
ತೋಡುತ್ತಿದ್ದೇವೆ ಎಂದರ್ಥ..

ಹಸಿವು
ಹಸಿದ ಹೊಟ್ಟೆ
ಅನ್ನ ಉಂಡಮೇಲೆ
ಅನ್ನಕೆ ಬೆಲೆ ಕಟ್ಟಬೇಕು.

ಓಟ
ಓಡುವ ಕಾಲುಗಳು
ಸೋಲಲಿ, ಆದರೆ
ಓಡುವ ಕಾಲ್ಗಳಿಗೆ
ಬಲದ ಮೂಲವಾದ
ಆತ್ಮಸ್ಥೈರ್ಯವಲ್ಲ.

ರಂಗೋಲಿ
ನೀನಿಕ್ಕುವ 
ರಂಗೋಲಿಗೆ
ನುಣುಪಾದ ನೆಲವಾಗುವ
ಆಸೆ.ನಿನ್ನ ಕೋಮಲ
ಸ್ಪರ್ಶದ ಜೊತೆಗೆ ಬಣ್ಣ-ಬಣ್ಣದ
ಚಿತ್ರ ಹೊತ್ತು ಬೀಗಬಹುದು.  
      
ನಕಲು
ಪ್ರೀತಿಯ
ಪರೀಕ್ಷೆಯಲಿ
ಇಬ್ಬರೂ ನಕಲು
ಮಾಡಿಯೇ
ಉತ್ತೀರ್ಣರಾದೆವು….
ಈಗ ನಕಲು ಪ್ರೀತಿಯಿಂದ
ಜೀವನವೇ ನಕಲು ನಕಲು.

ಪರೀಕ್ಷೆ 
ನನ್ನ ಪ್ರೀತಿಯ
ಅರ್ಥಮಾಡಿಕೊಳ್ಳದ
ಗೆಳತಿಗೊಂದು
ಪರೀಕ್ಷೆ ಇಡುವೆ.
ಅನುತ್ತಿರ್ಣತೆಯ
ಭಯದಲಿ 
ಪ್ರೇಮ ಪಠ್ಯವ ಓದಿ
ನನ್ನ ಪ್ರೀತಿಯನು
ಅರ್ಥೈಸಿಕೊಳ್ಳಬಹುದು.

ಜೀವನ
ಅರ್ಥ ಅನರ್ಥಗಳ
ತಿಕ್ಕಾಟಗಳ
ನಡುವಿನ
ಸತ್ಯಾನ್ವೇಷನೆಯೇ
ಜೀವನ

ತುಲನೆ
ಬರೀ ಅನ್ಯರ
ತುಲನೆಯಲಿ
ತೊಡಗಿಕೊಂಡಿರುವ
ಜನ ತಮ್ಮ ತೂಕವನ್ನು
ಕಳೆದುಕೊಂಡಿದ್ದಾರೆ.  
ಚೌಕಾಸಿ
ನಾನು ನನ್ನವಳ
ಚೌಕಾಸಿ ಚೌಕಟ್ಟುಗಳ
ಇಕ್ಕಳದಲ್ಲಿನ ಅಡಿಕೆ

ಹಂಚಿಕೆ
ಪ್ರೀತಿಯ ಹಂಚಿಕೆಯಲಿ
ಇಬ್ಬರು ಸೋತವರೇ,
ಅವಳು ನನ್ನದನ್ನು
ಹೆಚ್ಚಾಗಿ ಬಯಸಿದಳು
ನಾನು ಅವಳದನ್ನು
ಹೆಚ್ಚಾಗಿ ಬಯಸಿದೆ.

ಪಡೆದ ಪ್ರೀತಿ
ಕಷ್ಟ ಪಟ್ಟು
ಎಡಬಿಡದೆ ಓಡಾಡಿ
ಪಡೆದ ಮಾತು,
ಪ್ರೀತಿ, ಮುತ್ತು, ಅಪ್ಪುಗೆ
ನನಗಾಗಿ ಮುಡಿಪಾಗಿರುವಾಗ
ಮತ್ತಾವದಕೂ
ಕೈ ಚಾಚಿ ಓಡೆನು ನಾ ಗೆಳತಿ

ಓದು ಬರಹ
ಓದು ಬರಹಕ್ಕೆ
ಚಳಿಗಾಲದ ರಜೆ
ಕೊರೆವ ಚಳಿಗೆ
ಕಂಬಳಿಯ ಹೊದ್ದು
ಮನಸು ನಿದ್ರೆಗೆ ಜಾರಿದೆ

ಕಚಕುಳಿ
ನೆನೆಯದೇ
ಕರೆಯದೇ
ಬಂದು
ಕೊರೆವ ಚಳಿಯಲಿ
ಅರಳುತಿರೆ
ಅವಳ ನೆನಪು,
ತನು ಮನದಲ್ಲೆಲ್ಲ
ಬೆಚ್ಚಗಿನ ಕಚಕುಳಿ..

ದಾಹ
ಬರಡು ಬದುಕಲಿ
ಬಾಯಾರಲು
ದಾಹ ನೀಗುವ ಜಲವೆಲ್ಲಿ
ನೆರಳಿನ ಸೂರಾಗಲು
ಮರವೆಲ್ಲಿ..

ಭೂಗತ ದೊರೆ
ಅವಳು, ಉರಿಯುವ ಅಗ್ನಿ
ಬೀಸುವ ಬಿರುಗಾಳಿ
ಮೈ ಕೊರೆಯುವ ಚಳಿ
ಧುಮ್ಮುಕ್ಕುವ ಜಲಧಾರೆ
ಆಗಿಹಳು
ನನಗೇನು                       
ನಾನೀಗ ಇನ್ನೊಬ್ಬಳ
ಪ್ರೀತಿಯ ಭೂಗತ ದೊರೆ..

ನಳ

ನಾನು ಅವಳ 
ಬಿಸಿಯಾದ
ಒಲವಿನ 
ಒಲೆಯ ಮುಂದೆ
ತಣ್ಣಗೆ ಕುಳಿತು 
ಮೃಷ್ಟಾನ್ನ 
ಬೇಯಿಸುತ್ತಿರುವ 
ನಳ.

ಬನ್ನಿ-ಬಯಕೆ
ಹೋದ ವರ್ಷ 
ಬನ್ನಿಯ ಕೊಟ್ಟು
ಬಂಗಾರದ ಹಾಗೆ
ಇರೋಣಂತ
ಹೇಳಿದ್ದೆ ಗೆಳತಿಗೆ,
ವರ್ಷ ಬೆರಳಿಗೆ     
ಬಂಗಾರದುಂಗುರವನ್ಹಾಕಿ
ಬಾಳ ಸಂಗಾತಿಗಳಾಗೋಣ
ಎಂದು ಹೇಳುವ ಬಯಕೆ..
                             
ಮನಸು
ಹುಟ್ಟುವ ಪ್ರತಿ ಕನಸಿನ
ಚಟ್ಟವನೇರಿ ಅನುದಿನ
ಅನುಕ್ಷಣ ಹೆಣವಾಗುವ
ಮನಸು...

ಕವಿತೆ
ನೀ ಹಾಡಲು
ಒಲವ ಗೀತೆ
ಸೆಳೆದೆನ್ನ ಗಮನ,
ಮನದಿಳೆಯಲಿ
ಸುಸ್ರಾವ್ಯ ಮಳೆಗರೆದು
ಹುಟ್ಟಿಸಿದೆ ನಮ್ಮಿಬ್ಬರಿಗಾಗಿ
ಮತ್ತೊಂದು ಕವನ...

ಹೆಂಗಳೆ
ಪುಟ್ಟ ಪುಟ್ಟ ಕಂಗಳಲಿ
ಬೆಟ್ಟದಷ್ಟು ಕನಸನಿಟ್ಟು,
ಅಂಗೈ ಗಾತ್ರ ಹೃದಯದಲಿ
ಜಗದಗಲ ಬಯಕೆಯನಿಟ್ಟು
ಹೇಳದೆ ಕೇಳದೆ
ಮರೆಯಲಿ ಅವಿತು
ಎನ್ನೆದೆಯಲಿ
ಮೋಹದ ನಗು ಬೀರುವ
ಹೆಂಗಳೆ ನೀ ಯಾರೆ...??

ಜೀವನ
ನಾವು ನಾವಾಗಿ
ನಮ್ಮ ಜೀವನ ಧ್ಯೇಯದಲಿ
ಆತ್ಮ ಹಿಂಬಾಲಕರಾಗಿ
ಬದುಕುತಿರಲು 
ನಮ್ಮನ್ನು ಒಪ್ಪಿ
ಪ್ರೋತ್ಸಾಯಿಸುವ
ಜನರು ತುಂಬಾ
ವಿರಳ ಈ ಜಗದಲಿ...


ಸಿ.ಎಸ್.ಮಠಪತಿ