Friday 23 November 2012

ಸುಡುಗಾಡು ಕಟ್ಟಿದ ಗಂಗಜ್ಜಿ.....



ಅಂದು ಶನಿವಾರ, ಗಂಗಜ್ಜಿಯ ಪಕ್ಕದ ಮನೆಯ ವಾಸಿ “ಸುಮತಿ” ಮಕ್ಕಳನ್ನು ತಯಾರುಗೊಳಿಸಿ ಶಾಲೆಗೆ ಬೇಗ ಕಳಿಸಬೇಕೇನ್ನುವ ತರಾತುರಿಯಲಿ ನಸುಕಿನ ಐದು ಗಂಟೆಗೆ ಎದ್ದಿದ್ದಳು.ಹಾಸಿಗೆಯಿಂದೆದ್ದು ಪಕ್ಕದಲ್ಲಿ ಗೊರಕೆ ಹೊಡೆಯುತ್ತ ನಸುಕಿನ ಸಕ್ಕೆರೆ ನಿದ್ರೆಯ ಸವಿಯನ್ನು ಸವಿಯುತ್ತಿದ್ದ ಪತಿದೇವ “ದಿವಾಕರ”ನನ್ನು ಮಂಜುಗಣ್ಣನು ಉಜ್ಜುತ ನೋಡಿದಳು. ಮನದಲ್ಲೇ ತಳಮಳಿಸುತ್ತ, ಒಂದು ಕ್ರಿಮಿಯಾಗಿ ಹುಟ್ಟಿದರು ಪರವಾಗಿಲ್ಲ ಆದರೆ ಈ ಹೆಣ್ಣು ಜನ್ಮವಾಗಿ ಮಾತ್ರ ಹುಟ್ಟಬಾರದು ಶಿವಾ ಎಂದು ಗೊಣಗಿದಳು. ತನ್ನ ಕೋಪಕೆ ತಾನೇ ಒಂದಿಷ್ಟು ಸಮಾಧಾನ ಹೇಳುತ್ತ ದೇವರ ಕೋಣೆಯತ್ತ ನಡೆದಳು. ದೇವರ ಕೋಣೆಯಲಿ ಪ್ರಸನ್ನವದನರಾಗಿ ಕುಳಿತುಕೊಂಡಿದ್ದೆಲ್ಲ ದೇವರಿಗೂ ಬೆಳಗಿನ ಪ್ರಣಾಮಗಳನು ಸಲ್ಲಿಸಿ, ಸೀದಾ ಬಚ್ಚಲ ಮನೆಗ್ಹೋಗಿ ಹಾಳು ಮುಖಕ್ಕೆ ತಣ್ಣಗಿನ ನೀರನು ಸಿಂಪಡಿಸಿಕೊಂಡು ಕೈನಲೊಂದು ಚೊಂಬು ನೀರು ಹಿಡಿದುಕೊಂಡು ದ್ವಾರ ಬಾಗಿಲನು ತೆರೆದಳು. ದ್ವಾರ ಬಾಗಿಲಿಗೆ ನೀರನ್ನು ಸಿಂಪಡಿಸಿ ಮನೆಯ ಮುಂದನ ಅಂಗಳದ ಕಸ ಗೂಡಿಸಬೇಕೆನ್ನುವ ಸನ್ನಾಹದಲ್ಲಿರಲು “ಸುಮತಿ”ಯ ದೃಷ್ಠಿ ಎದುರಿಗೆ ಇದ್ದ ಹಳೆಯ ಕಾಲದ ಗಂಗಜ್ಜಿಗೆ ಮನೆಯ ಮೇಲೆ ಹರಿಯಿತು. ಮನದಲಿ ಗಲಿಬಿಲಿಗೊಂಡ ಸುಮತಿ ಈ ಗಂಗಜ್ಜಿಗೆ ಯಾವಗಲಾದ್ರು ಸಾವು ಬಂದು ಒಕ್ಕರಿಸುತ್ತೋ ಏನೋ, ಹಾಳಾದ ಮುದುಕಿ ಕಾಡಲ್ಲಿರೊ ಎಲ್ಲ ಕಟ್ಟಿಗೆಯನ್ನು ಜೀವನಪೂರ್ತಿ ಹೊತ್ತು ತಂದು, ತಂದು ಮನೆ ಎತ್ತರಕ್ಕೆ ಗುಡ್ಡೆ ಹಾಕಿದೆ. ಬೇಗ ಸತ್ತರೆ ಈ ಗುಡ್ಡೆ ಹಾಕಿದ ಕಟ್ಟಿಗೆಯಲ್ಲಿಟ್ಟು ಈ ಹಣ್ಣು ಹಂಪಾದ ಮುದಿಕಿಯನ್ನು ಸುಟ್ಟ್ಹಾಕಿ ಕೈತೊಳೆದುಕೊಳ್ಳುಬಹುದು ಎಂದು ಶಪಿಸಿದಳು. ಮನೆಯ ಮುಂದನ ಪ್ರಾಂಗಣವನ್ನು ಸ್ವಚ್ಚಗೊಳಿಸಿ ಗೊಣಗುತ್ತಲೆ ಮನೆಯೊಳಗೆ ನಡೆದಳು. ಅಡುಗೆ ಮನೆಯಿಂದ ಒಂದು ಲೋಟ ಬಿಸಿಯಾದ ಚಹಾ ಹಿಡಿದುಕೊಂಡು ಮಲುಗುವ ಕೊಠಡಿಗೆ ಬಂದು ಪತಿ ದಿವಾಕರನನ್ನು ಎಬ್ಬಿಸಿ ತಂದಿದ್ದ ಚಹಾ ಕೈಗಿತ್ತು. ಏನ್ರೀ, “ಇದು ದಿನಾಲು ಎಂಟು ಗಂಟೆವರೆಗೂ ಮಲಗ್ತೀರಾ, ಇವತ್ತು ಶನಿವಾರ ಮಕ್ಕಳು ಶಾಲೆಗೆ ಬೇಗ ಹೋಗಬೇಕು ಇವತ್ತಾದ್ರು ಸ್ವಲ್ಪ ಬೇಗ ಎದ್ದೇಳಬಾರದೆ”? ನಿಮ್ಮ ಅಪ್ಪ ಅಮ್ಮ “ದಿವಾಕರ” ಅಂತ ಹೆಸರಿಟ್ಟಿದ್ದಕ್ಕು ನಿಮಗೂ ಉತ್ತರ,ದಕ್ಷಿಣ ಬಿಡಿ.. ಸರಿ..ಸರಿ ..ಮೊದಲು ಚಹಾ ಕುಡಿಯಿರಿ ಆಮೇಲೆ ಹೋಗಿ ಸ್ನಾನ ಮಾಡಿಕೊಂಡು ಬನ್ನಿ….ಎನ್ನುತ್ತ ಅಡುಗೆ ಮನೆಗೆ ಮರಳಿದಳು. ಇತ್ತ, ಉಸ್ಸ ಎನ್ನುತ್ತ ಹಾಸಿಗೆಯಿಂದೆದ್ದ “ದಿವಾಕರ” ಹೆಂಡತಿಯ ಮಾತುಗಳನು ಸ್ವಗತಿಸುತ್ತ, ದೇವರೆ, ಇಂಥ ಮುದ್ದು ಹೆಂಡತಿಯನು ನೀಡಿದ್ದಕ್ಕೆ ಸಾವಿರ ನಮನ. ಎಂತಹ ಸಂದಿಗ್ಧತೆಯಲ್ಲು ಅವಳ ನಡೆ-ನುಡಿಯಲ್ಲಿನ ಪ್ರೀತಿಗೆ ಮಾತ್ರ ಕೊರತೆಯಿಲ್ಲ. ನನ್ನವಳು ಪ್ರೀತಿಯ ಕಡಲು, ಮಮತೆಯ ತಾಯಿ, ಮರುಕದ ಗಣಿ. ನನ್ನಿಂದ ಏನನ್ನಾದರು ಕಸಿದುಕೋ ಆದರೆ ಜೀವನದ ಕಡೆತನಕ ಇವುಗಳನ್ನು ಮಾತ್ರ ನನ್ನವಳಿಂದ ಕಸಿದುಕೊಳ್ಳಬೇಡ ಎಂದು ಪ್ರಾರ್ಥಿಸಿದನು.ಸುಮತಿ ತಂದು ಕೊಟ್ಟ ಚಹಾ ಕುಡಿದು ಬಚ್ಚಲ ಮನೆಯೆಡೆಗೆ ನಡೆದನು.

“ದಿವಾಕರ” ಹಲ್ಲು ಉಜ್ಜುತ್ತ ಹಿತ್ತಲಿನ ಮೂಲೆಯಲಿ ವ್ಯವಸ್ಥಿತಗೊಂಡಂಥ ಬಚ್ಚಲ ಮನೆಗೆ ಬರುವಷ್ಟರಲ್ಲಿ ಎದುರು ಮನೆಯ ಗಂಗಜ್ಜಿ ಬಂದು ನೀರೋಲೆಯ ಮುಂದೆ ಕುಳಿತು ಬೆಂಕಿಯನ್ನು ಹೊತ್ತಿಸಲು ಏದುಸಿರಲಿ ಒಲೆಯನ್ನು ಉದುತ್ತಾ ಕುಳಿತಿದ್ದಳು. ಎಪ್ಪತ್ತರ ಹರೆಯದ ಗಂಗಜ್ಜಿಯನ್ನು ನೋಡಿದ ದಿವಾಕರ, “ಏನ್ ಅಜ್ಜಿ ಇದು,ಬೆಳ್ಳಂಬೆಳಿಗ್ಗೆ ಎದ್ದು ನೀನು ದಿನಾಲು ಈ ರೀತಿ ನಮ್ಮಯ ಕೆಲಸ ಮಾಡಿದರೆ ನಾವು ಪಾಪಕ್ಕೆ ಶರಣಾಗಬೇಕಾಗುತ್ತೆ”..!! ಗಂಗಜ್ಜಿ, ನಡುಗುವ ದನಿಯಲ್ಲಿ… “ಇಲ್ಲ ಕಣಪ್ಪ ನಿಮ್ಮೆಲ್ಲ ಸೇವೆ ಮಾಡಿ ನನ್ನ ಪಾಪದ ಹೊರೆ ಕಡಿಮೆ ಮಾಡಿಕೊಳ್ಳುತ್ತಾ ಇದ್ದೇನೆ. ಹೋದ ಜನ್ಮದಲಿ ಏನು ಪಾಪ ಮಾಡಿದ್ನೋ ಏನೋ ಈ ಜನ್ಮದಲಿ ಆ ದೇವರು ನನ್ನಿಂದ ಎಲ್ಲವನು ಕಿತ್ತುಕೊಂಡಿದ್ದಾನೆ”. ನೀನು ಈ ರೀತಿ ಮಾತ್ರ ಮಾತನಾಡಬೇಡ, ನಾನು ಬೇರು ಸಡಿಲುಗೊಂಡು ಅಲ್ಲಾಡುತ್ತಿರುವ ಮುದಿ ಮರ ಯಾವಾಗ ಬಿದ್ದ್ಹೋಗುತ್ತೇನೋ ಏನೋ ಆ ಪರಮಾತ್ಮನೇ ಬಲ್ಲ. ಕಡೆ ಪಕ್ಷ ಇರೋವರಗಾದ್ರು ಈ ಒಂಟಿ ಜೀವಕ್ಕೆ ಮಕ್ಕಳಂತಿರುವ ನಿಮ್ಮ ಮತ್ತು ಮೊಮ್ಮಕ್ಕಳಂತಿರುವ ನಿಮ್ಮ ಮಕ್ಕಳ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಅದನ್ನ ಮಾತ್ರ ಕಿತ್ತುಕೊಳ್ಳಬೇಡ ಎಂದಳು. ದಿವಾಕರ ಗಂಗಜ್ಜಿಯ ಮಾತು ಕೇಳಿ ಒಂದು ಕ್ಷಣ ದಿಗಿಲುಗೊಂಡನು. ನಿಧಾನವಾಗಿ ಸುಧಾರಿಕೊಂಡು, “ಇರ್ಲೀ ಬಿಡು ಅಜ್ಜಿ, ನೀನು ಈ ರೀತಿ ಏನಾದರು ಸಮಜಾಯಿಸಿ ನೀಡಿ ನಮ್ಮ ಬಾಯನ್ನೇ ಮುಚ್ಚಿಸ್ತೀಯಾ. ಆದರು ಈ ಇಳಿವಯಸ್ಸಲ್ಲಿ ಇದೆಲ್ಲ ನಿನಗೆ ಬೇಕೆ”? ನಮ್ಮಗಳ ಸೇವೆ ಮಾಡ್ತೀಯಾ ಒತ್ತಾರೆ ಮತ್ತೆ ಬೆಟ್ಟಕ್ಕೆ ಹೋಗಿ ಕಟ್ಟಿಗೆ ತರ್ತೀಯಾ ಇದೆಲ್ಲ ಹಾಳು ಸಮಾಜ ಉದ್ಧಾರಕ ಕೆಲಸವನ್ನು ಬಿಟ್ಟು ನಿನ್ನ ಆರೊಗ್ಯದ ಕಡೆ ನಿಗಾ ವಹಿಸಬಾರದೆ? ಅಯ್ಯೋ, “ಮಗನೇ ನೀನು ಚಿಕ್ಕವ ನಿನಗೆ ಜೀವನ ಜ್ಞಾನ ಇನ್ನು ತಿಳಿದಿಲ್ಲ. ನಾವು ಇರುವಾಗ ಸಮಾಜಕ್ಕೆಂದು ಏನನ್ನು ಮಾಡದೇ ಹೋದರೆ ನಾಳೆ ನಾವು ಸತ್ತ ನಂತರ ನಮ್ಮ ಹೆಣ ಹೊರಲು ಬಿಡು ಮಣ್ಣ ಹಾಕಲು ಯಾರು ಬರಲ್ಲ, ಸತ್ತ ಹೆಣಕೆ ಕೊಳ್ಳಿ ಇಡಲು ಯಾರು ಇರಲ್ಲ”..!! ಹೋಗ್ಲಿ ಬಿಡು, “ನೀನು ಸಹ ನೌಕರಿಗೆ ಹೋಗೋನು ಬೇಗ ಸ್ನಾನ ಮಾಡಿ ತಯಾರಾಗು ಇಲ್ಲಂದ್ರೆ ಸುಮತಿ “ಚಂಡಿ”ಯಾಗಿ ಬಿಡ್ತಾಳೆ”….!! ದಿವಾಕರ ಉಸ್ಸ… “ಆಗಲಿ ಬಿಡ ಅಜ್ಜಿ ನೀನ್ಹೇಳಿದ ಮಾತಲ್ಲೂ ನ್ಯಾಯ ಇದೆ”. ಮತ್ತೆ ಇನ್ನೇನು ಮಕ್ಕಳು ಹಾಸಿಗೆಯಿಂದ ಗಂಗಜ್ಜಿಯೆನ್ನುತ್ತಲೇ ಎಂದೆಳ್ತವೆ, ಅವರನ್ನು ಸ್ನಾನ ಮಾಡಿಸೋಕೆ ನೀನೆ ಬೇಕು, ಯಾವ ಜನ್ಮದ ಋಣಾನುಬಂಧವೊ ಏನೋ ಅಜ್ಜಿ, ನಮಗೆ ನೀನಿಲ್ಲದೆ ನಮ್ಮ ಜೀವನ ಬಂಡಿನೇ ಸಾಗಲ್ಲ ನಮ್ಮ ಸಂಸಾರಕೆ ಒಂಟಿ ಎತ್ತಾಗಿ ಹೆಗಲು ಕೊಟ್ಟು ಬದುಕಿನ ಬಂಡಿ ಎಳೆಯುತ್ತಿದ್ದೀಯಾ,ಆ ದೇವರು ನಮ್ಮನ್ನು ಯಾವಾಗಲು ಹೀಗೆಯೇ ಇಟ್ಟಿರಲಿ. ಗಂಗಜ್ಜಿ:-ದಿವಾಕರಾ, “ನನ್ನ ಬಗ್ಗೆ ನೀನು ಇಷ್ಟೊಂದು ಮಾತನಾಡುವ ಅವಶ್ಯಕತೆಯು ಇಲ್ಲ, ಹೋಗು..ಹೋಗು ಮೊದಲು ಸ್ನಾನ ಮಾಡು” ಎಂದಳು. ದಿವಾಕರ ಅಜ್ಜಿಯ ಮಾತಿಗೆ ಓಗೊಟ್ಟು ಸ್ನಾನಕ್ಕೆ ತೆರಳಿದ.

ಗಂಗಜ್ಜಿ ಸಹ ದಿವಾಕರನ ಮಕ್ಕಳಾದ “ಚೇತಾಲಿ” ಮತ್ತು “ಪ್ರಜೇಶ್”ರನ್ನು ಸ್ನಾನ ಮಾಡಿಸಿ, ಸುಮತಿ..ಸುಮತಿ..ಎಂದು ಕೂಗಿದಳು!! ಮನೆಯೊಳಗಿಂದ ಸುಮತಿ ಏನಜ್ಜಿ ಎನ್ನುತ ಹಿತ್ತಲಿನ ಕಡೆಗೆ ದೌಡಾಯಿಸಿ ಬಂದಳು. ಗಂಗಜ್ಜಿ- ಸುಮತಿ ಮಕ್ಕಳಿಗೆ ಸ್ನಾನ ಮಾಡಿಸಿದ್ದೇನೆ ಅವರಿಗೆ ಶಾಲೆಯ ಸಮವಸ್ತ್ರ ತೊಡಿಸಿ ಕಳಿಸಿಕೊಡು. ನನಗು ಬೆಟ್ಟಕ್ಕೆ ಹೋಗಿ ಕಟ್ಟಿಗೆ ತರೋದಿದೆ ನಾನಿನ್ನು ಬರಲೇ? ಸುಮತಿ- ಗಂಗಜ್ಜಿ ಸ್ವಲ್ಪ ತಾಳು ಬಿಸಿ ಚಹಾ ಕೊಡ್ತೀನಿ ಕುಡಿದುಕೊಂಡು ಹೋಗು ಎಂದಳು. ಕ್ಷಣಾರ್ಧದಲಿ ಒಂದು ಲೋಟ ಚಹಾ ತಂದು ಗಂಗಜ್ಜಿಗೆ ಕೊಟ್ಟಳು. ಬೊಚ್ಚು ಬಾಯಿಂದ ಸುಯ್ಯ…ಸುಯ್ಯ ಎಂದು ಬಿಸಿಯಾದ ಚಹಾ ಹೀರಿ ತನ್ನ ಮನೆಯೆಡೆಗೆ ನಡೆದು ಹೋದಳು ಗಂಗಜ್ಜಿ.

ಎಪ್ಪತ್ತರ ಇಳಿವಯಸ್ಸಿನಲ್ಲೂ ಗಡಸು ಹೆಜ್ಜೆಯನಿಡುತ್ತ ಮನೆಕಡೆಗೆ ಹೋಗುತ್ತಿದ್ದ ಗಂಗಜ್ಜಿಯನ್ನು ಸುಮತಿ ಮನೆಯ ಮುಂದನ ಜಗಲಿಯ ಮೇಲೆ ನಿಂತು ಅಶ್ಚರ್ಯಗಣ್ಣಿನಿಂದ ಒಂದು ಕ್ಷಣ ಪ್ರಪಂಚವನು ಮರೆತು ಹಾಗೆ ನೋಡುತ್ತ ನಿಂತು ಬಿಟ್ಟಳು.ಸ್ವಲ್ಪ ಸಮಯದ ನಂತರ ಜಾಗೃತಗೊಂಡು ಅಯ್ಯೋ ದೇವರೆ ನಿಸ್ವಾರ್ಥದಿಂದ ನಮ್ಮೆಲ್ಲರ ಸೇವೆ ಮಾಡುವ ಗಂಗಜ್ಜಿ ಬೇಗ ತೀರಿಹೋಗಲಿ ಎಂದು ಶಪಿಸಿದೆನಲ್ಲ, ತಪ್ಪು…ತಪ್ಪು ಗಂಗಜ್ಜಿಯ ಬಗ್ಗೆ ಊರೇನೆ ಅಂದುಕೊಂಡರೇನು? ಗಂಗಜ್ಜಿ ಒಬ್ಬ ಹೃದಯವಂತ ಮಹಿಳೆ ಧೀರೆಯು ಸಹ ಅವಳನ್ನು ನಾನು ಹಾಗೆನ್ನಬಾರದಿತ್ತು. ದೇವರೆ ನನ್ನನು ಕ್ಷಮಿಸು ! ಈ ಹಿರಿ ಜೀವಕ್ಕೆ ಈ ಜೀವನದ ಸಂಧ್ಯಾಕಾಲದಲ್ಲಾದರು ಒಂಚೂರು ನೆಮ್ಮದಿಯನ್ನು ಕೊಡು. ಪಾಪ ಆಜೀವ ಪರ್ಯಂತ ಸಂಘರ್ಷದಲ್ಲಿಯೇ ಹೋರಾಡುತ್ತ ಬದುಕು ಸಾಗಿಸಿತು ಗಂಗಜ್ಜಿ. ಅದೇನೆ ಇರಲಿ ಊರ ನಮ್ಮ ಬಗ್ಗೆ ಏನೇ ಅಂದುಕೊಂಡರು ಪರವಾಗಿಲ್ಲ ಗಂಗಜ್ಜಿಯನ್ನು ಇರೋವರೆಗು ನನ್ನ ತಾಯಿಯ ಹಾಗೆ ನೋಡಿಕೊಂಡು ಹೋಗುವದು ನನ್ನ ಧರ್ಮ. ಈ ರೀತಿಯಾಗಿ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತ ಒಳ ನಡೆದಳು ಸುಮತಿ.

ದಿವಾಕರ ಎರಡು ಮಕ್ಕಳನ್ನು ಕರೆದುಕೊಂಡು ಸುಮತಿ ನಾನು ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತೇನೆ ಅಷ್ಟರಲ್ಲಿ ನನ್ನ ತಿಂಡಿ ಡಬ್ಬಿಯನ್ನು ತಯಾರಿಡು ನಾನು ತಿರುಗಿ ಬಂದವನೆ ಕೆಲಸಕ್ಕೆ ಹೊರಟು ಹೋಗುತ್ತೇನೆ. ಸುಮತಿ- ಆಗಲಿ ಮಹರಾಯ ಮೊದಲು ಮಕ್ಕಳನ್ನು ಶಾಲೆಗೆ ಬಿಟ್ಟು ಬಾ, ಸರೀನಾ. ಆಯ್ತು ಮಾಹರಾಳ್ತಿ ಎನ್ನುತ್ತಲೆ ಮಕ್ಕಳ ಕರೆದುಕೊಂಡು ದಿವಾಕರ ಹೊರಟು ಹೋದ.

ಮರು ದಿನ ರವಿವಾರದಂದು ದಿವಾಕರನ ಕುಟುಂಬ ತನ್ನೆಲ್ಲ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿ ಕೇವಲ ವಿಶ್ರಾಂತಿ ಮತ್ತು ಹೊರ ಸುತ್ತಾಟಕ್ಕೆಂದು ಮೀಸಲಾಗಿಟ್ಟಿತ್ತು. ಆವತ್ತು ಮನೆಯ ಎಲ್ಲ ಕೆಲಸವನ್ನು ಕೇವಲ ಗಂಗಜ್ಜಿ ನೋಡಿಕೊಳ್ಳುತ್ತಿದ್ದಳು.ದಿವಾಕರ ದಿನವೆಲ್ಲ ತನ್ನ ಕುಟುಂಬದ ಜೊತೆಗೆ ಸುತ್ತಾಡಿಕೊಂಡು ಸರಿಯಾಗಿ ಸಂಜೆ ಏಳು ಗಂಟೆಗೆ ಮನೆಗೆ ಮರಳಿದ. ಬರುತ್ತಿದ್ದಂತೆ ಮನೆಯ “ಲ್ಯಾಂಡ್ ಫೋನ್” ರಿಂಗನ್ನುತ್ತಿತ್ತು. ರಿಸಿವರ್ ಕೈಗೆತ್ತಿಕ್ಕೊಂಡು ಹಲೋ ಎನ್ನುತ್ತಿದ್ದಂತೆ, ಆ ಕಡೆಯಿಂದ ಸ್ಮಶಾನ ವಾರಸುಧಾರ “ಕಳಕಪ್ಪ” “ಸಾಹೇಬ್ರ ಪಂಚಾಯ್ತಿ ಚೇರಮನ್ರು ತೀರಿಕೊಂಡಾರು ಅದಕ್ಕೆ ನಾಲ್ಕು ಮೆದೆ ಕಟ್ಟಿಗೆ ಬೇಕಾಗಿತ್ತು ಸ್ವಲ್ಪ ಗಂಗಜ್ಜಿಗೆ ತಯಾರುಗೊಳಿಸಿ ಇಡೋಕೆ ಹೇಳ್ರಿ” ಅಂದ. ದಿವಾಕರಗೆ ಒಂದು ಕ್ಷಣ ಕೋಪ ಬಂತು. ಊರಲ್ಲಿ ಯಾರದರು ತೀರಿ ಹೋದರೆ ಮೊದಲು ಹೇಳೋದು ನಮಗೆ,ನಮ್ಮ ಮನೆಯ ಫೋನು ಸತ್ತ ಸುದ್ದಿ ತಿಳಿಸುವ ಪೆಟ್ಟಿಗೆ ಆಯ್ತು. ಈ ಗಂಗಜ್ಜಿಗೆ ಎಷ್ಟು ಹೇಳಿದ್ರು ಕೇಳೋದೆ ಇಲ್ಲ ಈ ಹಾಳಾದ ಹೆಣ ಸುಡಲು ಕಟ್ಟಿಗೆ ವ್ಯಾಪರ ನಿಲ್ಲಿಸು ಅಂದ್ರೆ ನಿಲ್ಲಿಸುವುದೇ ಇಲ್ಲ ಒಳ್ಳೆ ಜಟ್ಟಿ ಮುದುಕಿ ಸಹವಾಸ ಆಯ್ತು, ಎನ್ನುತ್ತಲೆ ಹೊರ ಬಂದು ಗಂಗಜ್ಜಿ..ಗಂಗಜ್ಜಿ ಎಂದು ಕೂಗಿದ. ಆ ಕಡೆಯಿಂದ ಗಂಗಜ್ಜಿ ಓಡಿ ಬರಲು…ದಿವಾಕರ- “ನೋಡು ಗಂಗಜ್ಜಿ ಪಂಚಾಯ್ತಿ ಚೇರಮನ್ ಹನುಮಂತಪ್ಪ ತೀರಿಕೊಂಡಿದ್ದಾನಂತೆ ಅದಕ್ಕೆ ನಾಲ್ಕು “ಮೆದೆ” ಕಟ್ಟಿಗೆಯನ್ನ ಎತ್ತಿ ಇಡು. ಸುಡುಗಾಡು ಕಾಯೊ ಕಳಕಪ್ಪ ಬಂದು ಒಯ್ಯುತ್ತಾನಂತೆ”. ಗಂಗಜ್ಜಿ.. “ಆಯ್ತು ಕಣಪ್ಪ ಎಂದು ಮರಳಿದಳು”.ದಾರಿಯುದ್ದಕ್ಕು ಪಾಪಿ ಹನುಮಂತಪ್ಪ ಅಧಿಕಾರದ ಅಮಲಿನಲಿ ತೀರಿ ಹೋದ. ಪಾಪಿ ಜನ್ಮಕೆ ಸ್ಮಶಾನ ತುಂಬಾ ಹತ್ತಿರ ಅಂತ ಬಹಳ ಸಾರಿ ಹೇಳಿದೆ ಹಾಳಾದ ಮನುಷ್ಯ ನನ್ನ ಮಾತ ಕೇಳಲೇ ಇಲ್ಲ. ಹಾದರ ಮಾಡುತ್ತಲೆ ಸತ್ತು ಹೋದ ಎನ್ನುತ್ತ ಮನೆ ತಲುಪಿದಳು.ಮನೆಗೆ ಬಂದವಳೇ ನಾಲ್ಕು “ಮೆದೆ” ಕಟ್ಟಿಗೆಯನ್ನು ಎತ್ತಿ ಇಟ್ಟಳು.

ಅರ್ಧ ಗಂಟೆಯ ನಂತರ ಮಸಣದ ಮಲ್ಲಿಗೆ ಕಳಕಪ್ಪ ಬಂದನು. ಗಂಗಜ್ಜಿ ಎಂದು ಗಂಗಜ್ಜಿಯನ್ನು ಕೂಗಿ ಕರೆದನು. ಒಳಗಿನಿಂದ ಕನ್ನಡಕವನ್ನು ಸರಿಮಾಡುತ್ತ ಗಂಗಜ್ಜಿ ಬಂದಳು. ಬಂದವಳೆ…ಏನ್ “ಕಳಕಾ” ದುಡ್ಡ ತಂದಿದ್ದೀಯೊ ಅಥವಾ ಕೈ ಬೀಸಿಕೊಂಡು ಹಾಗೇ ಬಂದಿದ್ದೀಯೋ ಎಂದಳು. ಗಂಗಂಜ್ಜಿನ ಗಡಸು ದನಿಗೆ ಕಳಕಪ್ಪ ಹೆದರುತ್ತಲೇ ,ಇಸ್ಕೋಂಡ ಬಂದಿದ್ದೇನೆ ಗಂಗಜ್ಜಿ ನನಗೆ ಗೊತ್ತಲ್ಲ ಕಾಸ್ಕೊಡದೆ ನೀನು ತುಂಡು ಕಟ್ಟಿಗೆಯನ್ನು ಮುಟ್ಟಲು ಬಿಡಲ್ಲ ಅಂತ ಎಂದ… ಇದಪ್ಪ ಮಾತಂದ್ರೆ ಇರ್ಲಿ ನಾಲ್ಕ ಮೆದೆ ಕಟ್ಟಿಗೆಗೆ ಎಂಬತ್ತು ರೂಪಾಯಿ ಮಡಗು, ಆಮೇಲೆ ಕಟ್ಟಿಗೆಯನ್ನು ಬಂಡಿಯಲ್ಲಿ ಹೇರಿಕೊಂಡು ಹೋಗು ಎಂದಳು. ಕಳಕಪ್ಪ ತಂದಿದ್ದ ಎಂಬತ್ತು ರೂಪಾಯಿ ಗಂಗಜ್ಜಿ ಕೈಗಿತ್ತು ಕಟ್ಟಿಗೆಯನ್ನು ಬಂಡಿಯಲ್ಲಿ ಹೇರಿದ. ಹೊರಡುವ ಮುನ್ನ ಕಳಕಪ್ಪ, ಗಂಗಜ್ಜಿ…, “ಊರ ಪಂಚಾಯ್ತಿ ಮುಂದ ದೊಡ್ಡ ಪಂಚಾಯ್ತಿನೆ ನಡೆದಿದೆ ಹನಮಂತಪ್ಪನ ಹೆಂಡತಿ ತನ್ನ ಗಂಡನನ್ನ ಊರ ಹೊರಗಿನ ಕಾಡಿನಲ್ಲಿ ಸುಡಲ್ವಂತೆ ಅವಳಿಗೆ ಹನುಮಂತಪ್ಪ ಹೆಸರ್ನಲ್ಲೆ ಒಂದು ಸುಡುಗಾಡು ಮಾಡಬೇಕಂತೆ ಅಲ್ಲಿವರೆಗೂ ಹೆಣವನ್ನು ಮನೆಯಿಂದ ಹೊರೊಕೆ ಬಿಡಲ್ವಂತೆ”, ಮತ್ತೆ ಹೆಣವನ್ನು ಸುಡದೆ ಊಳಬೇಕಂತೆ ಅಲ್ಲದೆ ಸಮಾಧಿಯ ಮೇಲೆ ಹತ್ತಿಪ್ಪತ್ತು ಅಡಿಯ ಸ್ಮಾರಕ ಕಟ್ಟಬೇಕಂತೆ ಎಂದ.ಕಳಕಪ್ಪನ ಮಾತನ್ನು ಬಲು ಎಚ್ಚರದಿಂದ ಆಲಿಸಿದ ಗಂಗಜ್ಜಿ, ಕಳಕಾ, ಸರಿ ನೀನ್ಹೋಗು… ಅದು ದೊಡ್ಡ ಡೊಂಬರಾಟ ಆಗೋ ಹಾಗೆ ಇದೆ. ಆ ಪಾಪಿ ಹನುಮಂತಪ್ಪನ ಹೆಣ ಅಷ್ಟು ಸಲೀಸಾಗಿ ಸ್ಮಶಾನ ಸೇರೊಲ್ಲ. ನಾಳೆ ನಮ್ಮ ಊರಲ್ಲಿ ದೊಡ್ಡ ಕುರಕ್ಷೇತ್ರನೇ ನಡೆಯೊ ಹಾಗೆ ಕಾಣತ್ತೆ ಎಂದಳು. ಕಳಕಪ್ಪ ಆಯ್ತು ಗಂಗಜ್ಜಿ ಎನ್ನುತ್ತಾ ಎತ್ತಿನ ಗಾಡಿ ಹೊಡೆದುಕೊಂಡು ಹೊರಟು ಹೋದ.

ಗಂಗಜ್ಜಿ ಅವಿವಾಹಿತ ಅವಿಧ್ಯಾವಂತ ಮಹಿಳೆ ಆದರೆ ಅವಳ ಲೋಕ ಜ್ಞಾನ ಮಾತ್ರ ಮೆಚ್ಚುವಂತದ್ದು. ನೋಡಲು ಕುರೂಪಿಯಾಗಿ, ಕೆಟ್ಟದಾಗಿದ್ದರಿಂದ ಗಂಗಜ್ಜಿಗೆ ಮದುವೇನೆ ಆಗಿರಲಿಲ್ಲ ಹುಟ್ಟಿ ಅದೇ “ಅರಳಿಕಟ್ಟೆ” ಗ್ರಾಮದಲ್ಲಿ ತನ್ನ ಎಪ್ಪತ್ತು ವರ್ಷದ ಜೀವನವನ್ನು ಸೆವೆಸಿದ್ದಳು. ಊರಿನವರ ಕಣ್ಣಲ್ಲಿ ಅಪಶಕುನದಂತೆ ಬಿಂಬಿತವಾಗಿದ್ದ ಗಂಗಜ್ಜಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಇಷ್ಟದ ಬದುಕನ್ನು ಸಾಗಿಸಿದ್ದಳು. ತುಂಬಾ ಹತ್ತಿರದಿಂದ ಗಂಗಜ್ಜಿಯನ್ನು ನೋಡಿದ ಜನ ಆ ಗ್ರಾಮದಲ್ಲಿ ತುಂಬಾ ಕಡಿಮೆ. ದಿವಾಕರನ ಕುಟುಂಬ ಸೇರಿದಂತೆ ಹತ್ತಾರು ಜನ ಮಾತ್ರ ಈ ಅಜ್ಜಿಯ ಹೃದಯ ಶ್ರೀಮಂತಿಕೆಯನ್ನು ಅರ್ಥೈಸಿಕೊಂಡಿದ್ದರು. ಅವಳೊಬ್ಬ ಧೀರ ಮಹಿಳೆ ಎಂತೆಂಥವರು ಅನ್ಯಾಯ ಅಪಚಾರ ಎಸಗಿದಾಗಲೆಲ್ಲ ಸೆಡ್ಡು ಹೊಡೆದು ನಿಂತವಳು.ಅರಳಿಕಟ್ಟೆ ಗ್ರಾಮದ ನೂರಾರು ವರ್ಷದ ತಿಹಾಸವನ್ನು ತನ್ನ ಪೂರ್ವಜರಿಂದ ತಿಳಿದುಕೊಂಡಿದ್ದಳು. ಊರಿನೆಲ್ಲ ಕುಟುಂಬಗಳ ಪೂರ್ವಾಪರ ಮತ್ತು ಅವರ ನಾಲ್ಕಾರು ತಲೆ ಮಾರಿನ ಪೀಳಿಗೆಯ ವಿವರವನ್ನು ಅರಳು ಹುರಿದಂತೆ ಹೇಳುತ್ತಿದ್ದಳು. ಆದರು ಒಮ್ಮೊಮ್ಮೆ ತೀರ್ವವಾದ “Self Analysis” ಗೆ ಒಳಪಟ್ಟು ಮಾಸಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಳು. ಗಂಗಜ್ಜಿ ,An “critical thinker and good decision taker” ಆಗಿದ್ದಳು ಎಂತಹ ವಯಕ್ತಿಕ ಮತ್ತು ಸಮಾಜಿಕ ಸಂದಿಗ್ಧತೆಗಳಲ್ಲೂ ತಾಳ್ಮೆ ಕಳೆದುಕೊಳ್ಳದೆ ಪರಿಹಾರವನ್ನು ಸೂಚಿಸುತ್ತಿದ್ದಳು.

ಆವತ್ತು ರಾತ್ರಿ ಸತ್ತ ಚೇರಮನ್ ಹನುಮಂತಪ್ಪನಿಗೆ ಅಂತಿಮ ನಮನ ತಿಳಿಸಲು ಗ್ರಾಮದ ಮತ್ತು ಸುತ್ತ ಮುತ್ತಲಿನ ನಾಲ್ಕಾರು ಹಳ್ಳಿಗಳಿಂದ ಜನ ಸಾಗರೋಪಾದಿಯಾಗಿ ಬರಲತ್ತಿತು. ಹನುಮಂತಪ್ಪ ಪಂಚಾಯ್ತಿ ಚೇರಮನ್ ಆಗಿದ್ದರಿಂದ ಅರಳಿಕಟ್ಟೆ ಸೇರಿದಂತೆ ಸುತ್ತ ಹತ್ತಾರು ಹಳ್ಳಿಗಳಲ್ಲಿ ಹೆಸರು ಮಾಡಿದ್ದ. ಇತ್ತ ಊರಿನ ಹಾಲಿನ ಡೇರಿಯ ಅದ್ಯಕ್ಷನಾಗಿದ್ದ ದಿವಾಕರನ ಮನೆಯಲ್ಲಿ ಗಂಗಜ್ಜಿ ಮಾತಿಗಿಳಿದು ಹರಟುತ್ತ ಕುಳಿತು ಬಿಟ್ಟಳು. ಮಾತಿನ ಮಧ್ಯ ಗಂಗಜ್ಜಿ ಹೇಳಿದಳು. “ನೋಡು ದಿವಾಕರ ನಾಳೆ ದಿನ ಆ ಸತ್ತಿರುವ ಹನುಮಂತಪ್ಪನ ಹೆಣವನ್ನು ದಾಳವಾಗಿ ಮಾಡಿಕೊಂಡು ನಮ್ಮ ಹಳ್ಳಿಯಲಿ ಏನೇಲ್ಲ ನಡೆಯುತ್ತದೆ”. ..ದಿವಾಕರ-“ಅದ್ಹೇಗೆ ಹೇಳ್ತೀಯಾ ಗಂಗಜ್ಜಿ ಊರಂದ ಮೇಲೆ ಹಲವಾರು ದಾರಿಗಳು ಇದ್ದೆ ಇರುತ್ತವೆ ಅವರವರ ಅನುಕೂಲಕ್ಕೆ ತಕ್ಕಂತೆ ಎಲ್ಲರು ನಡೆದಾಡುತ್ತಾರೆ, ಓಡಾಡುತ್ತಾರೆ” ಬಿಡು ಎಂದ. ಗಂಗಜ್ಜಿ- ಆಯ್ತಪ್ಪ ದಿವಾಕರ ನಾಳೆ ನೀನು ಹನುಮಂತಪ್ಪನ ಮನೆ ಕಡೆಗೆ ಹೋಗು ಎಲ್ಲವನ್ನು ನೀನೆ ಕಾಣತೀಯ ಮತ್ತೇ ಯಾವದಕ್ಕು ನನ್ನನ್ನು ಮಾತ್ರ ಅಲ್ಲಿಗೆ ಕರೆಯಬೇಡ ಎಂದಳು. ದಿವಾಕರ-“ಏನಜ್ಜಿ ಇದು ಎಲ್ಲವನ್ನು ಬರೀ ಒಗಟಾಗಿಯೇ ಮಾತನಾಡ್ತೀಯಾ ನನಗೆ ಒಂದೂ ಅರ್ಥವಾಗುವದಿಲ್ಲ” ಎಂದನು. ಅಷ್ಟರಲ್ಲಿ ಅಡುಗೆ ಮನೆಯಿಂದ ಸುಮತಿ ಬಂದು, ಏನಪ್ಪ “ಜೋರ ಪಂಚಾಯ್ತಿ ನಡೆದಿದೆ”? ಗಂಗಜ್ಜಿ, ನಿನಗೆ ಊರರವರ ಬಗ್ಗೆ ತಲೆಕೆಡಿಸಿಕೊಳ್ಳದೆ ತಿಂದ ಊಟ ಜೀರ್ಣನೇ ಆಗೋದಿಲ್ಲ. ಹೋಗು..ಹೋಗು ಸಮಯ ಹನ್ನೇರಡು ಆಗುತ್ತಲಿದೆ ಹೋಗಿ ಮಲಗು ಎಲ್ಲವನ್ನು ನಾಳೆ ನೋಡಿದರಾಯ್ತು ಎಂದಳು. ಇತ್ತ ಉಸ್ಸ ಎನ್ನುತ್ತ ಗಂಗಜ್ಜಿ-ದಿವಾಕರ ಹೋಗಪ್ಪ ಅಮ್ಮವ್ರು ಕಹಳೆ ಉದಿಯಾಯ್ತು ಹೋಗಿ ಮಲಗು ನಾನಿನ್ನು ಬರುತ್ತೇನೆ ಎಂದು ಮನೆಯೆಡೆಗೆ ನಡೆದಳು.

ಮರುದಿನ ಬೆಳ್ಳಂಬೆಳಿಗ್ಗೆ ಹನುಮಂತಪ್ಪನ ಮನೆಯ ಮುಂದೆ ಜನ ಜಮಾಯಿಸಲು ಶುರುವಿಟ್ಟುಕೊಂಡಿತು. ಮಳೆಗಾಲದ ಸಮಯವಾಗಿದ್ದರಿಂದ ಸಣ್ಣನೆಯ ಹಿತವಾದ ಮಳೆ ಸುರಿಯುತ್ತಿತ್ತು. ಅತ್ತ ಹನುಮಂತಪ್ಪನ ಹೆಣವನ್ನು ಮನೆಯ ಛಾವಡಿಯ ಗೋಡೆಗೆ ಮೊಳೆ ಹೊಡೆದು ಎಲ್ಲರಿಗೂ ಕಾಣುವ ಹಾಗೆ ಕುಳ್ಳಿರಿಸಲಾಗಿತ್ತು. ಹೆಂಡತಿ “ಪಾರ್ವತಿ” ಮತ್ತು ಬಂಧು ಬಳಗದ ಜನ ಸುತ್ತಲು ಕುಳಿತುಕೊಂಡು ಅಕ್ರಂದಿಸುತ್ತಿತ್ತು. ಹನುಮಂತಪ್ಪನ ಹೆಂಡತಿಯ ತಕರಾರುಗಳನ್ನು ಕೇಳಿಸಿಕೊಂಡಿದ್ದ ತಾಲೂಕಿನ ತಹಸೀಲ್ದಾರ “ದಾವಲ್ಸಾಬ್” ಜಿಲ್ಲಾಧಿಕಾರಿ “ಮುಕ್ರಿ” ತಾಲೂಕಿನ ಶಾಸಕ “ಅಂದಾನೆಪ್ಪ” ಮತ್ತು ಹಲವಾರು ಹಳ್ಳಿಗಳಿಂದ ಶ್ರೀಮಂತರು ಅನ್ನಿಸಿಕೊಂಡವರೆಲ್ಲ ಅರಳಿಕಟ್ಟೆಗೆ ಬಂದು ಸೇರಿದರು. ಆವತ್ತು ಸೋಮವಾರ ಹೊತ್ತು ಸರಿಸುಮಾರು ಬೆಳಗಿನ ಹನ್ನೊಂದು ಗಂಟೆ ಇರಬಹುದು ಸುರಿಯುತ್ತಿದ್ದ ಮಳೆ ತನ್ನಿಂತಾನೆ ನಿಂತು ಹೊಯ್ತು. ಇತ್ತ ಬಂದಿದ್ದ ಅಧಿಕಾರಿ ವರ್ಗದ ಪಂಡಿತರು ಮತ್ತು ರಾಜಕೀಯ ಭಂಡರು ಮಾತಿಗಿಳಿದರು. ತಮ್ಮ ತಮ್ಮ ಸ್ವಾರ್ಥ ತುಂಬಿದ ಮಾತುಗಳಿಂದ ನೆರೆದಿದ್ದ ಜನರ ಚಿತ್ತ ಕದಿಯಲು ಶುರು ಇಟ್ಟುಕೊಂಡರು. ಮಾತು ಮಾತಿಗೆ ಮಾತು ಬೆಳೆಯುತ್ತ ಮಧ್ಯಾಹ್ನ ಕಳೆದು ಹೋಯ್ತು ಯಾವದೇ ಸ್ಪಷ್ಟತೆ ಕಾಣದೇ ಬಳಲಿ ಬೆಂಡಾಗಿ ಹೋದರು ನೆರೆದಿದ್ದ ಮಹಾಶಯರು.

ನೆರೆದಿದ್ದ ಜನರಲ್ಲಿ ಒಂದೇ ಮಾತು ನಮ್ಮ ಊರಿಗೆ ಸ್ಮಶಾನ ಅಂತ ಮಾಡೋದಾದರೆ ಎಲ್ಲ ಧರ್ಮಿಯರಿಗೂ ಒಂದೊಂದು ಬೇರೆ ಬೇರೆಯದೇ ಸ್ಮಶಾನ ಬೇಕು. ನಾವು ಬದುಕಿದ್ದು ನಮ್ಮ ನಮ್ಮ ಧರ್ಮಗಳ ಕಟ್ಟಳೆಗಳಲ್ಲಿ ನಾಳೇ ಸತ್ತರು ನಾವು ಒಂದೆ ಕಡೆಗೆ ಇರಬೇಕು ಎನ್ನುತ್ತ ತಮ್ಮ ತಮ್ಮ ಧರ್ಮದ ಮೇಲಾಟಕ್ಕೆ ಇಳಿದರು.ಬಂದಿದ್ದ ಅಧಿಕಾರಿ ವರ್ಗದ ಪಂಡಿತರು ಮತ್ತು ರಾಜಕೀಯ ಭಂಡರು ತಬ್ಬಿಬ್ಬಾಗಿ ಹೋದರು. ಅದರಲ್ಲಿ ಊರಿನ ಸಿರಿವಂತರಲ್ಲಿ ಶ್ರೀಮಂತ ಅನ್ನಿಸಿಕೊಂಡ “ಕೈಲಾಸ”ಪ್ಪ ಮುಂದೆ ಬಂದು ಬರೀ ಸ್ಮಶಾನ ಅಷ್ಟೆ ಅಲ್ಲ ಹನುಮಂತಪ್ಪನಿಗೆ ಸಮಾಧಿಯ ಮೇಲೆ ಸ್ಮಾರಕ ಕಟ್ಟಿದ್ದೆ ಆದರೆ ನಮ್ಮಯ ಸಮಾಧಿಯ ಮೇಲೂ ಹತ್ತಿಪ್ಪತ್ತು ಅಡಿಯ ಸ್ಮಾರಕವನ್ನು ಕಟ್ಟಲು ಅನುಮತಿ ಕೊಡಬೇಕು ಎಂದ. ಇದನ್ನೆಲ್ಲ ಆಲಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಕಂಗೆಟ್ಟು ಹೋದರು. ಸಣ್ಣದಾಗಿ ಹೊಗೆಯಾಡುತ್ತಿದ್ದ ಸಮಸ್ಯ ಈಗ ಕಾಳ್ಗೀಚ್ಚಿನಂತೆ ಹೆಮ್ಮರವಾಗಿ ಬೆಳೆದು ನಿಂತಿತು.ಹಾಲಿನ ಡೇರಿಯ ಅಧ್ಯಕ್ಷ ದಿವಾಕರ ಒಂದು ಮೂಲೆಯಲಿ ನಿಂತುಕೊಂಡು ಎಲ್ಲವನ್ನು ಆಲಿಸುತ್ತ ನಿಂತುಬಿಟ್ಟ.

ಸಮಯ ಸಂಜೆ ಆರು ಗಂಟೆಯಾಗುತ್ತಲ್ಲಿತ್ತು, ಈ ಹೊತ್ತಿಗೆ ಹನುಮಂತಪ್ಪ ತೀರಿ ಸರಿಯಾಗಿ ಇಪ್ಪತ್ತ್ನಾಲ್ಕು ಗಂಟೆಯಾಯ್ತು. ಸಣ್ಣಗೆ ನಿರ್ಜೀವ ದೇಹದಿಂದ ದುರ್ವಾಸನೆ ಹರಡಲು ಪ್ರಾರಂಭವಾಯ್ತು. ನೆರೆದಿದ್ದವರಲ್ಲ ಗೊಂದಲದ ಗೂಡಾಗಿ ಹೋದರು. ಇತ್ತ ಸತ್ತ ಹನುಮಂತಪ್ಪನಿಗಾಗಿ ಅಳುತ್ತಿದ್ದ ದನಿಗಳು ಮತ್ತು ಕಣ್ಣೀರುಗಳು ಒಂದೊಂದಾಗಿ ನಿಂತುಹೋದವು. ಮಬ್ಬುಗತ್ತಲು ಆವರಿಸುತ್ತಿದ್ದಂತೆ ಬಂದಿದ್ದ ಸರ್ಕಾರಿ ಮತ್ತು ರಾಜಕೀಯ ಹುಲಿಗಳ ಬಾಲಗಳು ಮುದುಡಿಹೋದವು.ದಾರಿ ಯಾವುದಯ್ಯ ಎನ್ನುತ್ತ ಎಲ್ಲರೂ ನಿಸ್ಸ್ಹಾಯಕರಾಗಿ ಹೋದರು.

ಇತ್ತ ಊರಿನ ಸಜ್ಜನರಲ್ಲಿ ಸಜ್ಜನ ಅನ್ನಿಸಿಕ್ಕೊಂಡಿದ್ದ, ಬಳಿಗಾರ “ರುದ್ರಯ್ಯ” ಎದ್ದು ನಿಂತು ನೆರೆದಿದ್ದ ಜನರನ್ನುದ್ಧೇಶಿಸಿ ಹೇಳಿದ. “ನೋಡಿ ಸತ್ತ ಹೆಣವನ್ನು ಮುಂದೆ ಇಟ್ಟುಕೊಂಡು ಈ ರೀತಿ ಕಚ್ಚಾಡುವದು ನಾಗರಿಕರ ಲಕ್ಷಣ ಅಲ್ಲವೇ ಅಲ್ಲ”. ಜಾತೀ, ಧರ್ಮ,ಪಂಥ ದಿಂದ ಹೊರಬಂದು ಎಲ್ಲರೂ ಮೊದಲು ಮನುಷ್ಯರಾಗಿ ಪರಿಸ್ಥಿತಿಯನ್ನು ಒಳಗಣ್ಣಿನಿಂದ ನೋಡಿ ಆಮೇಲೆ ನಿಮಗೆ ಬಾಯಿಗೆ ಬಂದಂತೆಲ್ಲ ಮಾತನಾಡಿ.ಈ ಕಾರಣದಿಂದ ನಮ್ಮ ಹಳ್ಳಿಯ ಹೆಸರನ್ನು ನಾಡಿಗೆ ಪರಿಚಯಿಸಿ ಮಾನ ಮರ್ಯಾದೆಯನ್ನೆಲ್ಲ ಹರಾಜು ಹಾಕಬೇಡಿ ಎಂದ. ಇದಕ್ಕೆ ಉತ್ತರವಾಗಿ ಮೂಲೆಯಲ್ಲಿ ನಿಂತಿಕೊಂಡಿದ್ದ ದಿವಾಕರ ಮಾತಿಗಿಳಿದ. ಹೌದು.. “ನಿಮ್ಮ ಮಾತಿಗೆ ನಾನು ಸಮ್ಮತಿಸುತ್ತೇನೆ. ಮುಂದೆ ಮಾಡೋದಾರದು ಏನು ಹೇಳಿ”. “ರುದ್ರಯ್ಯ” ಒಂದು ಕ್ಷಣ ಸುತ್ತಲೂ ಕಣ್ಣಾಡಿಸಿ ಕೇಳಿದ. “ದಿವಾಕರ ಅಂದ ಹಾಗೆ ಗಂಗಜ್ಜಿ ಎಲ್ಲಿ”? ದಿವಾಕರ-ಗಂಗಜ್ಜಿಗೆ ಇವತ್ತು ನಡೆಯುವ ಈ “ಡೊಂಬರಾಟ” ನಿನ್ನೇನೆ ತಿಳಿದಿತ್ತೇನೊ ಗೊತ್ತಿಲ್ಲ ಇಲ್ಲಿಗೆ ಬರುವದಿಲ್ಲ ಅಂತ ನೆನ್ನೇನೆ ನನಗೆ ಹೇಳಿದ್ದಾಳೆ. ಇವತ್ತು ಯಾವದೇ ಕಾರಣಕ್ಕೆ ಇಲ್ಲಿಗೆ ಸುತಾರಾಂ ಬರುವದಿಲ್ಲ ಅವಳು. ಈ ಮಾತನ್ನು ಕೇಳಿಸಿಕೊಂಡ ಜಿಲ್ಲಾಧಿಕಾರಿ “ಮುಕ್ರಿ” ಕುತೂಹಲದಿಂದ ಕೇಳಿದ ಆ ಗಂಗಜ್ಜಿ ಯಾರು? ಅವಳೆಲ್ಲಿದ್ದಾಳೆ? ದಿವಾಕರ- ಸರ್..ಗಂಗಜ್ಜಿ ಒಬ್ಬ ಕಟ್ಟಿಗೆಯ ವ್ಯಾಪಾರಿ ಹೆಣವನ್ನು ಸುಡಲು ಮಾತ್ರ ಕಟ್ಟಿಗೆಯನ್ನು ಮಾರಿಕೊಂಡು ಜೀವನ ಸಾಗಿಸುತ್ತಾಳೆ.ಅವಳು ಇಲ್ಲಿಗೆ ಬಂದರೆ ಖಂಡಿತವಾಗಿಯೂ ಈ ಸಮಸ್ಯ ಪರಿಹಾರವಾಗುತ್ತೆ. ಸ್ಮಶಾನದ ಬಗ್ಗೆ ಅವಳಿಗೆ ತಿಳಿದಷ್ಟು ಯಾರಿಗೂ ತಿಳಿದಿಲ್ಲ…! ದಿವಾಕರನ ಈ ಎಲ್ಲ ಮಾತನು ಕೇಳಿದ “ಮುಕ್ರಿ” ಸಾಹೇಬ್ರು ವಿಳಂಬ ಮಾಡದೆ ತನ್ನೇಲ್ಲ ಅಧಿಕಾರಿ ಮತ್ತು  ಜನಪ್ರತಿನಿದಿಗಳನ್ನು ಕರೆದುಕೊಂಡು ಗಂಗಜ್ಜಿಯ ಮನೆಯೆಡೆಗೆ ನಡೆದರು.

ಮನೆಯೊಳಗಿನ ಜಗಲಿಯ ಮೇಲೆ ತಾಂಬುಲ ಜಗಿಯುತ್ತ ಕುಳಿತಿದ್ದ ಗಂಗಜ್ಜಿಯನ್ನು ಕಂಡು “ಮುಕ್ರಿ” ಸಾಹೇಬ್ರು ಗಂಗಜ್ಜಿ ಒಳಬರಬಹುದೇ? ವಿನಂತಿಸಿಕೊಂಡರು. ತನ್ನ ಕನ್ನಡಕವನ್ನು ಸರಿಪಡಿಸುತ್ತಾ ಯಾರಿರಬಹುದು ಈ ಗುಂಪು ಕಟ್ಟಿಕೊಂಡು ಬಂದ ಜನ ಎಂದು ವಿಚಾರ ಲಹರಿಯಲಿ ಒಂದು ಕ್ಷಣ ಮುಳುಗಿಹೋದಳು ಗಂಗಜ್ಜಿ..! ಅಷ್ಟರಲ್ಲಿ ಜೊತೆಗಿದ್ದ ದಿವಾಕರ ಎಲ್ಲವನ್ನು ಮತ್ತು ಎಲ್ಲರನ್ನು ಗಂಗಜ್ಜಿಗೆ ಪರಿಚಯಿಸಿಕೊಟ್ಟ. ತಕ್ಷಣ ಗಂಗಜ್ಜಿ ತನ್ನ ಹಠಮಾರಿತನವನ್ನು ಮೆರೆದಳು. ಮುಕ್ರಿ ಸಾಹೇಬ್ರನ್ನು ಕುರಿತು ಹೇಳಿದಳು. ನೀವು ಜಿಲ್ಲಾಧಿಕಾರಿ ಮತ್ತು ಅಂದಾನಪ್ಪನವರು ತಾಲೂಕಿನ ಶಾಸಕರು ನಿಮ್ಮಿಂದಾನೇ ಈ ಸಮಸ್ಯಯನ್ನು ಪರಿಹರಿಸಲಾಗಿಲ್ಲ ಅಂದಮೇಲೆ ನಾನಾವ ಮರದ ತೊಪ್ಪಲು? ನಾನು ಬರುವುದಿಲ್ಲ, ನಿಮ್ಮ ಜನವುಂಟು ನಿಮ್ಮ ಕರ್ತವ್ಯವುಂಟು ಎಲ್ಲವನ್ನು ನೀವೆ ನಿಭಾಯಿಸಿಕೊಳ್ಳಿ ಎಂದು ಕಡ್ಡಿ ಮುರಿದಂತೆ ಹೇಳಿದಳು. ಗಂಗಜ್ಜಿಯ ಪ್ರತಿಕ್ರಿಯೆಯಿಂದ ಬಂದಿದ್ದ ಜನರೆಲ್ಲ ದಂಗಾಗಿಹೋದರು. ಅಷ್ಟರಲ್ಲಿ ಶಾಸಕ  “ಅಂದಾನಪ್ಪ” ಗಂಗಜ್ಜಿ ಹಾಗೆನ್ನಬೇಡ ನಮಗೆಲ್ಲ ಗೊತ್ತು ನಾವೇನಾದರೂ ಈ ಸಮಸ್ಯ ಪರಿಹರಿಸಲು ನಿಂತರೆ ಸತ್ತಿರುವ ಹನುಮಂತಪ್ಪನ ಹೆಣ ಕನಿಷ್ಟ ಪಕ್ಷ ಆರು ತಿಂಗಳಾದರು ಮೊಳೆಹೊಡೆದುಕೊಂಡು ಕುಳಿತಿರೊ ಜಾಗದಲ್ಲಿಯೇ ಕುಳಿತುಕೊಳ್ಳಬೇಕಾಗುತ್ತೆ. ನಿನಗೆ ಗೊತ್ತು ಸರ್ಕಾರದ ಕೆಲಸಗಳ ವೇಗ ಮತ್ತು ಮಾನದಂಡಳು ಎಂತವು ಅಂತ ದಯವಿಟ್ಟು ನಿನ್ನ ಹಠವ ಮುರಿದು ನಮ್ಮ ಜೊತೆ ಬಾ ಎಂದನು. ಕೊನೆಯದಾಗಿ ದಿವಾಕರ ಗಂಗಜ್ಜಿಯ ಮನವೊಲಿಸಿ ಅಖಾಡಕ್ಕೆ ಕರೆತಂದನು.

ತಿಂದು ಸೊಕ್ಕಿದ ಗೂಳಿಯಂತೆ ತನ್ನ ಬಾಗಿದ ಮುದಿ ಬೆನ್ನನ್ನು ಪರಿಶ್ರಮದಿಂದ ಮೇಲಕ್ಕೆ ಹಿಗ್ಗಿಸುತ್ತು ತನ್ನ ಒಯ್ಯಾಡುವ ಕತ್ತನ್ನು ನಿಯಂತ್ರಿಸುತ್ತಾ ಎಲ್ಲರ ಮುಂದೆ ಮುಂದೆ ಗಂಗಜ್ಜಿ ನಡೆದು ಬರುತ್ತಿದ್ದರೆ, ಊರಿನೆಲ್ಲ ಜನ ಈ ಅಪಶಕುನಕ್ಕೆ ಇಂದು ಮುಗಿಲು ಮೂರೇ ಗೇನು ಎಂದು ಆಡಿಕೊಳ್ಳುತ್ತಿದ್ದರು.ಅವರಲ್ಲಿ ಒಂದಿಷ್ಟು ಜನ ಗಂಗಜ್ಜಿಯ ಪರವಾಗಿ ಹಿತ ನುಡಿಗಳನ್ನು ನುಡಿಯುತ್ತಿದ್ದರು. ದಾರಿಯ ಹಲವಾರು ತಿರುಳುಗಳನು ಕ್ರಮಿಸಿ ಕಾಲು ಗಂಟೆಯಲಿ ಎಲ್ಲರೂ ಸತ್ತ ಹನುಮಂತಪ್ಪನ ಮನೆಯಂಗಳ ತಲುಪಿದರು.

ಹನುಮಂತಪ್ಪನ ಮನೆಯಂಗಳದಲ್ಲಿ ಜಮಾವನೆಗೊಂಡಿದ್ದ ಜನರೆಲ್ಲಿ ಜಾತೀವಾರು ತಂಡಗಳಾಗಿ ತಮ್ಮ-ತಮ್ಮದೆಯಾದ ಬೇರೆ-ಬೇರೆ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದವು. ಪರಿಸ್ಥಿಯ ಎಲ್ಲ ಒಳ ಹೊರ ತಿರುಳುಗನ್ನು ದಾರಿಯುದ್ದಕ್ಕೂ ದಿವಾಕರನಿಂದ ಕೇಳಿ ತಿಳಿದುಕೊಂಡಿದ್ದ ಗಂಗಜ್ಜಿ “ಮುಕ್ರಿ” ಸಾಹೇಬರ ಅನುಮತಿ ಪಡೆದು ತನ್ನ ಮಾತನ್ನು ಶುರುವಿಟ್ಟುಕೊಂಡಳು. “ನನಗೆ ಗೊತ್ತು ನಿವೇಲ್ಲ ಇವತ್ತು ಅನಿಷ್ಟ ಮುದುಕಿಗೆ ಸ್ವರ್ಗದ ಬಾಗಿಲು ತೆರೆದಿದೆ ಅಂತ ಅಂದುಕೊಂಡಿದ್ದೀರಿ. ಸ್ವರ್ಗ ನರಕದ ತತ್ವಾತತ್ವವನ್ನು ಅರಿಯುವ ಶಕ್ತಿ ಆ ದೇವರು ನನಗೆ ಕೊಟ್ಟಿಲ್ಲ ಅಂತ ಗೊತ್ತು”. ಆದರೆ ನಿಮ್ಮೇಲ್ಲ ದಾರಿದ್ರ್ಯತುಂಬಿದ ಬದುಕು ಮತ್ತು ಜಾತಿ ಪಂಥಗಳೆಂಬ ಆಡಂಭರಿಕ ವ್ಯಭಿಚಾರಿಕತನ ಅರಿಯುವ ಶಕ್ತಿಯನ್ನು ಆ ದೇವರು ನನಗೆ ಕೊಟ್ಟಿದ್ದಾನೆ. ಮುಕ್ರಿ ಸಾಹೇಬ್ರೆ ಈ ಚೆಂಡಾಲ ಜನಕ್ಕೆ ನೀವೇನಾದರು ಜಾತಿಗೊಂದು ಸ್ಮಶಾನ ಅಂತ ಸರ್ಕಾರದಿಂದ ಭೂಮಿಯನ್ನು ಕೊಟ್ಟಿದ್ದೆ ಆದರೆ ನಮ್ಮೂರ ಸುತ್ತಲಿನ ಹಸುರಿನ ಕಾಡು ನಮ್ಮ ಹೆಣವನು ಸುಡುವ ಸುಡುಗಾಡು ಆಗಿಬಿಡುತ್ತೆ. ಬದುಕಿದ್ದಾಗಲಂತು ಜೊತೆ ಜೊತೆಗೆ ಮನುಷ್ಯರಾಗಿ ಬದುಕಲಿಲ್ಲ ಈ ಜನ, ಜಾತಿಯ ಬೇಲಿಯೊಳಗೆ ಮನುಷ್ಯತ್ವವನ್ನು ಕೊಂದು ಬದುಕಿದರು. ಇನ್ನು ಸತ್ತ ಮೇಲೂ ತಮ್ಮ ಹೆಣಗಳಿಗೆ ಬದುಕಿನ ಅಸ್ತಿತ್ವವನ್ನು ಕಟ್ಟಿಕೊಡಲು ಹೋಗುತ್ತಿದ್ದಾರೆ. ಬೇಕಿದ್ದರೆ ಹೇಳಿ ಸಾಹೇಬ್ರೆ, ಜೀವನ ಪರ್ಯಂತ ಹೆಣ ಸುಡಲು ಕಟ್ಟಿಗೆ ಮಾರಿ ನನ್ನದೆಯಾದಂತ ಹತ್ತು ಎಕರೆ ಭೂಮಿಯನ್ನು ಹೊಂದಿದ್ದೇನೆ ಬೇಕಾದರೆ ಆ ನೆಲವನ್ನೆಲ್ಲ “ಸುಡುಗಾಡಿ”ಗಾಗಿ ಬಿಟ್ಟು ಕೊಡುತ್ತೇನೆ. ನನಗಾದರು ಹಿಂದೆ ಮುಂದೆ ಯಾರು ಇಲ್ಲ ಎಂದಳು ಗಂಗಜ್ಜಿ..!ಆ ಕಡೆಯಿಂದ “ಹುಸೇನಸಾಬ” ಎದ್ದು ನಿಂತು ನೀನೇನು ನಿನ್ನ ಹೆಸರು ಅಜರಾಮರವಾಗಿರಲಿ ಅಂತ ಭೂಮಿಯನ್ನು ಬಿಟ್ಟು ಕೊಡುತ್ತಿದ್ದಿಯಾ ಆ ಭೂಮಿಯಲ್ಲಿ ನಾವು ಸತ್ತವರನ್ನು ಊಳುತ್ತಾ ಹೋದರೆ ನಾಲ್ಕೇ ವರ್ಷದಲಿ ಸ್ಮಶಾನ ಸಮಾಧಿ ಕಟ್ಟೆಗಳಿಂದ ತುಂಬಿ ಹೋಗುತ್ತೆ.! ಇದನ್ನ ಕೇಳಿದ ಗಂಗಜ್ಜಿ – ಮುಕ್ರಿ ಸಾಹೇಬ್ರೆ ನಾನು ಬಿಟ್ಟು ಕೊಡುತ್ತಿರುವ ನೆಲದಲ್ಲಿ ಯಾರು ಹೆಣಗಳನ್ನು ಊಳುವಂತಿಲ್ಲ ಮತ್ತು ಸ್ಮಾರಕ, ಮಂದಿರ, ಗುಡಿಯಂತ ಏನು ಕಟ್ಟುವಂತಲ್ಲ. ಕೇವಲ ಸತ್ತ ಹೆಣವನ್ನು ಸುಡಲು ಮಾತ್ರ ಅನುಮತಿ ಅಲ್ಲಿ. ಒಪ್ಪಿಗೆ ಇಲ್ಲದ ಜನ ಸತ್ತ ದೇಹವನ್ನು ತಮ್ಮ ಮನೆಯ ಪಡಸಾಲೆಯಲ್ಲಿಯೇ ಊತಾಕಿ ಮನೆಯನ್ನೆ ಸತ್ತವನಿಗೆ ಸ್ಮಾರಕವನ್ನಾಗಿಸಲಿ ಅದಕ್ಕೆ ಯಾರ ತಕರಾರು ಮಾಡುತ್ತಾರೆ. ಅದನ್ನು ಬಿಟ್ಟು ಕಾಡು ಮರಗಳನು ಕಡೆದೆ ಇಡಿ ನಾಡನ್ನೇ ಸ್ಮಶಾನ ಮಾಡಲು ಹೊರಟಿರುವ ಈ ಜನಕ್ಕೆ ನೀವು ತಾಳ ಹಾಕುತ್ತಿದ್ದರಲ್ಲ. ಮತ್ತೆ ಈ ಮಾತು ಹನುಮಂತಪ್ಪನ ವಿಧವೆ ಪತ್ನಿ ಪಾರ್ವತಿಗೂ ಅನ್ವಯಿಸುತ್ತದೆ. ಬೇಕಾದರೆ ನಾ ಬಿಟ್ಟುಕೊಡುತ್ತಿರು ನೆಲದಲ್ಲಿ ತನ್ನ ಅಹಂಗಳನ್ನೆಲ್ಲ ಬಿಟ್ಟು ಹೆಣವನ್ನು ಸುಟ್ಟುಹಾಕಲಿ ಇಲ್ಲ ಅಂದರೆ ತನ್ನ ಮನೆಯಲ್ಲಿಯೇ ಊತು ಮನೆಯನ್ನೇ ಸ್ಮಾರಕವನ್ನಾಗಿಸಲಿ..!! ಸಾಹೇಬ್ರೆ ನಡೆಯಿರಿ ಉಂಡು ಮಲಗುವ ಸಮಯ ಆಯ್ತು ಎಲ್ಲರು ಹೋಗೋಣ ಹನುಮಂತಪ್ಪನ ಕತೆಯನ್ನು ಪರ್ವಾತಿಯೇ ನೋಡಿಕೊಳ್ಳುತ್ತಾಳೆ ಎಂದಳು. ಇಷ್ಟು ದಿನ ಅನಿಷ್ಟ, ಅಪಶಕುನ ಎಂತೆಲ್ಲ ಕರೆಯುತ್ತಿದ್ದ ಜನ ಒಂದೇ ಸಾರಿಗೆ ಗಂಗಜ್ಜಿಮಾತಿಗೆ ಜೈ ಅಂದಿತು. ಜಾತಿ, ಮತ, ಪಂಥ ದಿಂದ ಹೊರಬಂದು ಗಂಗಜ್ಜಿನೀಡಿದ ನೆಲದಲ್ಲಿ ಸತ್ತ ಜನಗಳ ಸುಟ್ಟುಹಾಕಲು ಸಮ್ಮತಿಸಿತು. ಬದುಕಿದ್ದಾಗ ಜಾತಿ ವಿಜಾತಿಗಳೆಂಬ ಬೇಲಿಯೊಳಗೆ ಬದುಕುತ್ತಿದ್ದ ಜನ ಸಾವಿನ ನಂತರ ಭೂಮಿಗೆ ಬೇಲಿಹಾಕಿ ಇದು ನಮ್ಮ ಸ್ಮಶಾನ, ಅದು ನಿಮ್ಮ ಸ್ಮಶಾನ ಎನ್ನದೇ ಅರಳಿಕಟ್ಟೆ ಗ್ರಾಮಕೆ ನೀಡಿದ ಸ್ಮಶಾನದ ನೆಲವನ್ನು ತಮ್ಮ ಸಾವಿನ ನಂತರದ ಬದುಕಿನ ಮನೆಯಾಗಿಸಿಕೊಂಡರು.

ಕಡು ಬಡತನದಲಿ ಏಕಾಂಗಿಯಾಗಿ ಬದುಕು ಪ್ರವಾಹ ವಿರುದ್ಧ ದಿಟ್ಟ ಹೆಜ್ಜೆಗಳನಿಡುತ ಬದುಕಿದ ಗಂಗಜ್ಜಿ ಅವಳ ಸಾವಿನ ಮುಂದಿನ ಸಂಧ್ಯಾಕಾಲದ ದಿನಗಳಲಿ ಸಂಘರ್ಷ ಜೀವನಕೆ ಸಾಕ್ಷಾತ್ಕಾರದ ಮನ್ನನೆ ಸಿಕ್ಕಿತು. ನೈಜ ಹೋರಾಟಕೆ ಸುಖಾಂತ್ಯ ನಿಶ್ಚಿತ ಎನ್ನುವ ಮಾತು ಕಾಕತಾಳೀಯ ಎಂಬಂತೆ ಗಂಗಜ್ಜಿ ಬಾಳಿನಲಿ ನಿಜವಾಗಿ ಹೋಯ್ತು.ಗಂಗಜ್ಜಿ ತೀರಿದ ಮೇಲೆ ಅದೇ ರುದ್ರಭೂಮಿಯಲಿ ಅವಳನ್ನು ದಹಿಸಿ “ಗಂಗಜ್ಜಿ ರುದ್ರ ಭೂವಿ” ಎಂದು ಸ್ಮಶಾನಕೆ ನಾಮಕರಣ ಮಾಡಿದರು. ಬದುಕಿದ್ದಾಗ ಎಲ್ಲರ ಮನ ಮನೆಯಿಂದ ದೂರಾಗಿ ಬದುಕಿದ ಗಂಗಜ್ಜಿ ಸತ್ತ ಮೇಲೆ ಎಲ್ಲರ ಮನ ಮನೆಯಲಿ “ಮಾತೆ”ಯಾಗಿ ಹೋದಳು.ಇತ್ತ ಗಂಗಜ್ಜಿಯನು ಬಲು ಹತ್ತಿರದಿಂದ ತಮ್ಮ ಕುಟುಂಬ ಸದಸ್ಯೆಯಂತೆ ನೋಡಿದ ದಿವಾಕರನ ಕುಟುಂಬಕೆ ಅರಳಿಕಟ್ಟೆಯಲಿ ಜಮ ಮನ್ನನೆ ಮತ್ತು ಸಂಪೂರ್ಣ ಗೌರವ ಲಭಿಸಿತು.
ಚಿನ್ಮಯ್

No comments:

Post a Comment