Sunday 16 September 2012

ಎದೆಯಾಳದ ಹನಿಗಳು ಭಾಗ-3


ಪ್ರಶ್ನೆ

ಉತ್ತರವ ಹುಡುಕಿ
ಹೊರಟ ಬದುಕು
ದಾರಿಯಲಿ ಎದುರಾಗುತ್ತಿವೆ
ಬರೀ ಪ್ರಶ್ನೆಗಳು
ಕವನ
ಖಾಲಿ ಕಾಗದೆದೆಯ
ಮೇಲೆ ಗೀಚುವ
ಕವನಗಳಿಗೆ
ಓದುಗ ನೀನೇ ಕಿರಿಟ
ನೀನೇ ಮುಕುಟ
ನಗುತ್ತಾರೆ
ನಗುತ್ತಾರವರು
ನನ್ನ ನೋಡಿ
ನಾನು ನಾನಾಗಿ
ಬದುಕುತ್ತಿರುವೆನಲ್ಲ,
ಅಷ್ಟು ಸಾಕು ಬಿಡಿ..



ಪ್ರೀತಿಯ ತೊಟ್ಟಿಲು

ನೀ ಕಟ್ಟಿ ಹೋದ ಪ್ರೀತಿಯ
ತೊಟ್ಟಿಲು ನಿಂತು ಹೋಗಿದೆ
ತೂಗುವ ಕೈಗಳಿಲ್ಲದೆ…

ಹೆಜ್ಜೆ ಗುರುತು
ನನ್ನೆದೆಯ ಪ್ರಾಂಗಣದಲಿ
ನಲಿ-ನಲಿದು ಸಹಸ್ರ
ಆಟವಾಡಿ ದೂರಾದೆ
ನಾನು ತಪ್ಪೇನು
ಅಂದುಕೊಂಡಿಲ್ಲ,
ನಿನ್ನ ಹೆಜ್ಜೆ ಗುರುತುಗಳು
ಅಚ್ಚಹಸುರಾಗಿ
ಉಳಿದುಕೊಂಡಿವೆಯಲ್ಲ
ಅಷ್ಟು ಸಾಕು…


ಮಾನದಂಡ
ನನ್ನ ಪ್ರೀತಿಯ
ಆಳವನ್ನಳೆಯಲು
ಅವಳು
ಉಪಯೋಗಿಸಿದ್ದು
ಅಪನಂಬಿಕೆ ಎಂಬ
ಮಾನದಂಡ....

ಮಡದಿ

ಸಹಬಾಳ್ವೆಯುತ
ಜೀವನ ನಡೆಸುತ್ತೇನೆಂದು
ಬಾಳಿಗೆ ಬಂದ ಮಡದಿ
ಈಗ ಕೇವಲ
ಸಿಹಿಯನ್ನಷ್ಟೇ ಹೀರುತ್ತಿದ್ದಾಳ...




ಸಮಾಧಿ                    
ಇಂದು ನನ್ನ
ಸಮಾಧಿಯ ಮುಂದೆ
ನಿಂತು ಕಣ್ಣೀರಿನ ಜತೆಗೆ
ಪುಷ್ಪವನು ಅರ್ಪಿಸುತ್ತಿರುವ 
ನೀನು, ಅಂದು ಕೇವಲ
ನನ್ನ ಕಣ್ಗಳ 
ಭಾಷೆಯನ್ನರಿತಿದ್ದರೆ
ಸಾಕಿತ್ತು...

ವಿಪರ್ಯಾಸ
ದಿನಾಲು ಏನನ್ನಾದರು 
ಬರೆಯಲೇ ಬೇಕೆಂದು
ಮನಸ್ಸು ರಚ್ಚೆ ಹಿಡಿದಾಗ,
ಬುದ್ಧಿ ಹೊಟ್ಟೆ ಕಿಚ್ಚಿನಿಂದ
ಭಾವನೆಗಳನ್ನು  
ಹುಟ್ಟು ಹಾಕುವುದೇ ಇಲ್ಲ...

ಪ್ರೀತಿಯ ಬೀಜ
ಹುಟ್ಟಿ
ಹೊರ ಬರಬೇಕಾಗಲು
ಬೇಕಾಗುವಗಳನ್ನೆಲ್ಲ
ನಿನ್ನ ಜೊತೆಗೆ
ಕೊಂಡೊಯ್ದೆ..
ಬರೀ ಪ್ರೀತಿಯ ಬೀಜವನು
ನನ್ನೆದೆಯಲಿಟ್ಟೆ….

ವರ್ಷಧಾರೆ
ಬಾ ಗೆಳತಿ,
ಹೋದ ವರ್ಷದ
ಮುಂಗಾರು 
ಮತ್ತೆ ಸುರಿಯುತಿದೆ
ಈ ಹಣಿವ ವರ್ಷಧಾರೆಯಲಿ
ಪ್ರೀತಿಯ ತೇರನೇರಿ
ಜಗವ ಮರಿಯುವ
ಕಾಗದದ ದೋಣಿಯ
ಹರಿದು ಬಿಡುತ...

ಹನಿ-ಹನಿ
ಈ ಸುರಿಯುತ್ತಿರು ಮಳೆ
ನಿಲ್ಲುವ ಸೂಚನೆಯೇ ಇಲ್ಲ,
ಬಾ ಒಂದು ಸಾರಿ ನೆನೆದು
ಹೋಗೊಣ...
ಇಷ್ಟು ದಿನ ಬೆಚ್ಚಗೆ ಅವಿತಿದ್ದ
ಮಾತುಗಳು, ಹನಿಗಳ
ತಂಪಿಗೆ ನಡುಗಿ
ಹೊರ-ಹೊಮ್ಮಬಹುದು....

ಸುಮ್ಮನೆ
ಸುಮ್ಮನೆ ಊರೆಲ್ಲ
ಸುತ್ತಿ ಬಂದ ಮೇಲೆ
ಗೊತ್ತಾಯ್ತು
ನಮ್ಮ ಮನೆಯ ನೀರಿನ ರುಚಿ...

ಕನ್ನಡಿ
ಕತ್ತಲಿನ ಕನ್ನಡಿಯಂತಹ
ನಿನ್ನಲಿ ನಾನು ನನ್ನನು
ಕಾಣಲೆತ್ನಿಸಿದ್ದೇ
ದೊಡ್ಡ ದುರಂತ...

ಗೆಳತಿ
ನನ್ನ ಮುಗ್ಧ ಗೆಳತಿಗೆ         
ಹೇಳಿದೆ. ಪೆದ್ದು, ನಮ್ಮ
ಹೃದಯದಲಿ ನಾಲ್ಕು
ಕವಾಟುಗಳಿವೆಯೆಂದು
ನಸುನಗುತ ಕೇಳಿದಳಾಕೆ
ಒಂದರಲ್ಲಿ ನಾನು ಇನ್ನು
ಉಳಿದವುಗಳಲಿ ಯಾರಿಹರೆಂದು..

ಹಾಗೆ
ಏನಾದರು ಆಗಲಿ
ನನ್ನೆದೆಯಲಿ ಧೂಳೆಬ್ಬಿಸಿ
ಏನು ಕಾಣುತ್ತಿಲ್ಲವೆಂದು
ಲುಬುತ್ತಿರುವ
ವಳ ಜಾಣತನಕ್ಕೆ
ನಾನು ಈಗ
ಬಿರುಗಾಳಿ ಆಗಲೆಬೇಕು..!!!

ರಂಗ-ಮಂದಿರ
ಜಗವೆಂಬ ರಂಗ ಮಂದಿರದಿ
ಎಲ್ಲರೂ ಪಾತ್ರಧಾರಿಗಳೆ
ಆದರೆ, ಅವರವರ
ಭಾವ-ಭಕುತಿಗೆ
ತಕ್ಕಂತೆ ಬಣ್ಣ ಬದಲಿಸುತ್ತಾರಷ್ಟೆ..

ಪಟ್ಟದರಸಿ
ಇರುವಿಕೆಗೆ ಹುಲ್ಲು ಮನೆಯಾದರೇನು
ಕಲ್ಲು ಮನೆಯಾದರೇನು
ನಲ್ಲಾ, ನಿನ್ನೆದೆಯ ಪಟ್ಟದರಸಿ ನಾ
ನನಗೇಕೆ ಕಲ್ಲು-ಮಣ್ಣಿನಾ ಹಂಗು..
ನೀನೆ ನಾನಾಗಿರುವಾಗ..

ಹುಡುಗಿ
ಅದೇನೋ ಒಂದು ಹೇಳಬೇಕು ಕಣೋ
ಏನು ಅಂತಾ ಗೊತ್ತಾಗ್ತಾನೆಯಿಲ್ಲ,
ಎಂಬ ಹುಡುಗಿಯ ಈ ವಾಕ್ಯದಲ್ಲಿಯೇ
ಹುಡುಗನ ಜೀವನದ ಐಕ್ಯ..

ನಿರೀಕ್ಷೆ
ನಿರೀಕ್ಷೆ ತುಂಬಿದ ಕಂಗಳಲಿ
ಜಗತ್ತಿನ ಸಹಸ್ರ ವಿಸ್ಮಯಗಳನು
ಸತ್ವಯುತ
ನಿಜ ದೃಷ್ಟಿಯಿಂದ ಕಾಣುವ
ಬಲವಿರುತ್ತದೆ...

ಸಿ.ಎಸ್.ಮಠಪತಿ

No comments:

Post a Comment