Tuesday 5 June 2012

ನೀತಿ(ಕಥೆ)







         ಇದೊಂದು ದೂರದಿಂದ ಕಂಡಂಥ ಜೀವನ ಕ್ರಮದ ನೆನಪಿನ ಬುತ್ತಿಯಿಂದ ಹೊರಹೊಮ್ಮಿದಂಥ ಕಥೆ.ಕ್ಷೌರಿಕನನ್ನು ಕಂಡು ಕೋಣವು ಕಾಲೆತ್ತಿತ್ತಂತೆ;ನನ್ನ ಬಗಲಲ್ಲಿನ ಒಂದಿಷ್ಟು ಜವುಳ ಮುಂಡನೆ ಮಾಡಿ ಹೋಗು ಅಂತ, ಅಂಥ ಅವಕಾಶವಾದಿಗಳು ತುಂಬಿರುವಂಥ ಕೊಟ್ಟಿಗೆ ಅದು. ಅಂಥವರಲ್ಲಿ ಪಾಪಣ್ಣ ಒಬ್ಬ..!!ಪ್ರಾಯಶಃ ಪಾಪಣ್ಣಗೆ ನಲವತ್ತರ ಹರೆಯ,ಓದಿದ್ದು ಎರಡೊ.ಮೂರನೆಯ ತರಗತಿ ಇರಬಹುದು,ಆದರೆ ಅವನು ಧರಿಸುತ್ತಿದ್ದ ಬಟ್ಟೆ,ಮಾತಿನ ಶೈಲಿ.ವರ್ತನೆ,ನಾಟಕೀಯ ನಡುವಳಿಕೆ ಎಲ್ಲವು ಒಬ್ಬ ಪದವಿಧರನನ್ನು ಮೀರಿಸುವಂತಿತ್ತು.ಹಾಳೂರಿಗೆ ಉಳಿದವನೆ ಗೌಡ ಎನ್ನುವಂತೆ,ಶ್ವೇತ ವರ್ಣದ ತಿಳಿ ನೀಳಿ ಹಾಕಿದ ಧೋತಿ, ನೆಹರು ಅಂಗಿ,ಗಾಂಧಿ ಟೋಪಿ ಕೈಲೊಂದು ಚಿಕ್ಕ ಬ್ಯಾಗ್ ಹಿಡಿದು ದೌವುಲತ್ತಿನಿಂದ ಜೋಡು ಅಟ್ಟೆಯ ಚರ್ಮದ ಚಪ್ಪಲಿ ಸದ್ದು ಮಾಡುತ್ತ ಬೆಳ್ಳಂಬೆಳಿಗ್ಗೆ ಏಳು ಗಂಟೆಗೆ ಗ್ರಾಮದ ತಾಲುಕು ಘಟಕಕ್ಕೆ ಹೊರಟು ಹೋಗುತ್ತಿದ್ದ.ಮತ್ತೆ ತನ್ನದೈನಂದಿನ ಕೆಲಸಗಳನ್ನು ಮುಗಿಸಿಕೊಂಡು ಕಟ್ಟ ಕಡೆಯ ಬಸ್ಸಿಗೆ ರಾತ್ರಿ ಎಲ್ಲರು ಉಂಡು ಮಲಗುವ ಸಮಯಕ್ಕೆ ಹಳ್ಳಿಗೆ ಮರಳುತ್ತಿದ್ದ.

         ಓದು ಒಕ್ಕಾಲಾದ್ರು ಅವನ ಬುದ್ಧಿ ಮಾತ್ರ ಮುಕ್ಕಾಲು!ಹಳ್ಳಿಯ ಗ್ರಾಮ ಲೆಕ್ಕಿಗನಿಂದ ಹಿಡಿದು ತಹಸೀಲ್ದಾರವರೆಗೂ ಅವನ ಪರಿಚಯದ ಕೊಂಡಿ ಬೆಳೆದಿತ್ತು.ಕೆಲವೊಂದು ರಾಜಕೀಯ ಪುಂಡರ ಸ್ವಚ್ಛ ನಂಟು ಅವನಿಗಿತ್ತು.ಸರ್ಕಾರದ ಯಾವದೆ ಜನಪರಯೋಜನೆಗಳು ಅನುಷ್ಟಾನಗೊಂಡರೆ ಸಾಕು,ಅವುಗಳಿಗೆ ತಕ್ಷಣ ಹೊಂಚು ಹಾಕಿಬಿಡುತ್ತಿದ್ದ.

        ಅವನ ಕೈಯಲ್ಲಿ ಹಳ್ಳಿಯ ಎಷ್ಟೊ ಮಹಿಳೆಯರು ಪತಿ ಬದುಕಿದ್ದಾಗಲೆ ವಿಧವೆಯರಾಗಿದ್ದರು,ದೈಹಿಕ, ಮಾನಸಿಕ ಸಧೃಡರು ವಿಕಲಚೇತನರಾಗಿದ್ದರು, ಐವತ್ತರ ಆಸುಪಾಸಿನವರು ವಯೋವೃದ್ಧರಾಗಿದ್ದರು. ಹೀಗೆಯೆ ಕಾಗದದ ಮೇಲೆ ಜನರನ್ನು ಈ ರೀತಿಯಾಗಿ ಮಾರ್ಪಡಿಸಿ ಅವರಿಂದ ಚಂದಾವಸೂಲಿ ಮಾಡುತ್ತಿದ್ದ ಪಾಪಣ್ಣ.

        ಆವತ್ತು ಭಾನುವಾರ ಕೈಯಲ್ಲಿ ಯಾವ ಕೆಲಸ ಇಲ್ಲದೆ ಪಾಪಣ್ಣ ಖಿನ್ನನಾಗಿ ತನ್ನ ಹೊಲದ ಕಡೆಗೆ ಹೆಜ್ಜೆ ಹಾಕಿದ್ದ, ಅವನ ವಿಚಾರ ಪಟಲದಲ್ಲಿ ಅವೆ ಸಂಗತಿಗಳ ಕಾರುಬಾರು, ಮತ್ತೆ ಯಾರಿಗೆ ಏನು ಮಾಡಬೇಕು ಹೇಗೆ ಪಾಪದ ಹಣ ಈ ಪಾಪಣ್ಣನ ಜೇಬಿಗೆ ಸ್ವಾಗತಿಸಬೇಕು ಎನ್ನುತ್ತಲೆ ಹೊಲದ ಸೀಮೆಯನ್ನು ತಲುಪಿಯಾಯ್ತು. ಅಲ್ಲಿ ಅಣತಿ ದೂರದಿಂದ ತನ್ನ ಎಡಗೈಯಿಂದ ಕಣ್ಣುಗಳಿಗೆ ಬಿಸಿಲಿನ ಮರೆಮಾಡಿಸಿ ಅವನ ವಯೋವೃದ್ಧ ತಂದೆ ಕೀರಲು ಧ್ವನಿಯಲ್ಲಿ ಯಾರದು ಅಲ್ಲಿ ಬರ್ತೀರೊದು’? ಪಾಪಣ್ಣ- ‘ಅಪ್ಪನಾನು,ಪಾಪಣ್ಣ ಕಣಪ್ಪಹೊಹೊ ಪಾಪಣ್ಣ ಈಗ ಬಂದಿಯೆನಪ್ಪ ಇವತ್ತು ಇಂಥ ಸುಡು ಬಿಸಿಲಲ್ಲಿ ಯಾಕೆ ಬರೋಕೆ ಹೋದೆ?ಮನೆಯಲ್ಲಿನೆ ಇರಬೇಕಿತ್ತಲ್ಲ,ಅಷ್ಟಕ್ಕು ಇಲ್ಲಿ ಅಂಥ ಕೆಲಸವಾದರು ಏನಿತ್ತು? ಪಾಪಣ್ಣ-ಇರಲಿ ಬಿಡಪ್ಪ ನಾನೇನು ದಿನಾಲು ಬರುತ್ತೆನೆಯೇ?ಸರೀ ಬಿಡಪ್ಪ ನೀನು ಇಲ್ಲಿಯೆ ಈ ಬೆವಿನ ಮರದ ಕೆಳಗೆ ಮಲಗಿರು ನಾನು ಬಾವಿಯಿಂದ ಒಂದು ಚೊಂಬು ನೀರು ತರುತ್ತೇನೆ ನೀನು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ತಗೊಳುವಂತೆ ಅಂಥೇಳಿ, ತಾತ ಬಾವಿಕಡೆಗೆ ದೌಡಾಯಿಸಿದ.

        ಬೆವಿನ ಮರದ ಬುಡಕ್ಕೆ ಒರಗಿ ಬಾವಿಕಡೆಗೆ ಹೋಗುತ್ತಿದ್ದ ಅಪ್ಪನನ್ನೆ ಹಸಿವುಗಣ್ಣಿನಿಂದ ಪಾಪಣ್ಣ ನೋಡುತ್ತಿರುವಾಗಲೆ,ಅವನ ತಲೆಯಲ್ಲಿ ಮಿಂಚಿನಂತೆ ಒಂದು ವಿಚಾರ ತೇಲಿ ಹೋಯ್ತು ಅದು ಅವತ್ತು ಅವರಮ್ಮನನ್ನು ವಿಧವೆಯಾಗಿಸು ವಿಚಾರ.ತಟ್ಟನೆ ತನ್ನ ಪಾಪ ಕೆಲಸದ ಜಂಟಿ ಸಹೊದ್ಯೋಗಿ ಪೋಟೊ ಗ್ರಾಪರ್ ಕೈಲಾಸಿಗೆ ಪೋನಾಯಿಸಿ ಕ್ಯಾಮರ ಜತೆಗೆ ಬರಲು ಹೇಳಿದ. ಕೈಲಾಸಿ ಅಲ್ಲಿಗೆ ಬರುವಷ್ಟರಲ್ಲಿ ತನ್ನ ಅಪ್ಪನಿಗೆ ತನ್ನ ದುರುದ್ದೇಶವನ್ನು ಬಚ್ಚಿಟ್ಟು ತನಗೆ ಬೇಕಾದ ಕೋನದಲಿ ಕ್ಯಾಮರಾಗೆ ಪೋಸ್ ಕೊಡಲು ಹೇಳಿದ. ಏನು ಅರಿಯದ ಮುಗ್ಧ ತಂದೆ ಮಗನ ಇಚ್ಛೆಯಂತೆಯೆ ನಡೆದುಕೊಂಡ.

        ತನ್ನ ಅಪ್ಪನ ಮೃತ ಭಂಗಿಯ ನಾಲ್ಕಾರು ಭಾವಚಿತ್ರಗಳನ್ನು ತೆಗೆದುಕೊಂಡು ಅಪ್ಪ ಸತ್ತ ಘಟನೆಗೆ ಅವನ ತಂಡದ ಸದಸ್ಯರಿಂದ ಸಾಕ್ಷಿಗಳಿಬ್ಬರ ರುಜುಗಳನ್ನು ಪಡೆದು ಮಾರನೆ ದಿನ ಉಪನೋಂದನಾಧಿಕಾರಿಯಿಂದ ಮರಣ ಪ್ರಮಾಣ ಪತ್ರವನ್ನು ಪಡೆದ. ಅಲ್ಲಿಂದ ತನ್ನತಾಯಿಗೆ ವಿಧವಾ ಪಿಂಚನಿಗೆ ಅರ್ಜೀಯನ್ನು ಸಂಭಂದ ಪಟ್ಟ ಇಲಾಖೆಗೆ ರವಾಣಿಸಿದ.

       ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಪಾಪಣ್ಣನ ತಾಯಿಗೆ ತಿಂಗಳಿಗೆ ಎರಡು ನೂರು ರೂಪಾಯಿ ಪಿಂಚನಿ ಬರಲಾರಂಭಿಸಿತು.ತನ್ನ ತಾಯಿಗೂ ಕೂಡಾ ಅಂಥದೆ ಸಮಜಾಯಿಸಿ ನೀಡಿ ಯಾವದೆ ಪ್ರಶ್ನೆಯನ್ನು ಮಾಡದಂತೆ ನೋಡಿಕೊಂಡ.ಈಗ ಊರಿನ ಅನ್ಯ ಕಾಗದದ ವಿಧವೆಯರ ಪಟ್ಟಿಗೆ ಸ್ವತಹ ತನ್ನ ತಾಯಿಯನ್ನು ಸೇರಿಸಿದ.

       ಕಾಲಕಳೆದಂತೆ ಇಂಥದ್ದೆ ಪಾರಮ್ಯವನ್ನು ಮೆರೆಯುತ್ತ ಊರಿನ ಒಂದು ವರ್ಗದ ಜನಕ್ಕೆ ಅಚ್ಚುಮೆಚ್ಚಿನ ಕೆಚ್ಚೆದೆಯ ನಾಯಕ ಎಂದೆನಿಸಿಕೊಂಡ.ಇನ್ನೊಂದು ವರ್ಗದ ಜನಕ್ಕೆ "ಪಾಪಿ ಪಾಪಣ್ಣ" ಎನಿಸಿಕೊಂಡ. ಹೀಗಿರುವಾಗ ಯಾವಾಗಲು ಹೊಲದ ಒಂದು ಮುರಕಲು ಗುಡಿಸಿಲಿನಲಿದ್ದು ಗದ್ದೆಯ ಕೆಲಸವನ್ನು ನೋಡಿಕೋಳ್ಳುತ್ತಿದ್ದ ತಂದೆ ಮುದಿವಯಸ್ಸಿಗೆ ಸಂಭಂದ ಪಟ್ಟ ಶ್ರವನ ಮತ್ತು ದೃಷ್ಟಿ ಕ್ಷೀನತೆಯಿಂದ ಮನೆಯ ಹಾಸಿಗೆ ಹಿಡಿದುಬಿಟ್ಟ .ಇತ್ತ ವಿಧಿಯು ಕೂಡ ಪಾಪಣ್ಣನ ಬಾಳಿಗೆ ಕದಂಭ ಭಾಹುಗಳನ್ನು ಚಾಚಿಯಾಗಿತ್ತು. ಪಾಪಣ್ಣ ಪುಪ್ಪಸ ಅರ್ಬುದಕ್ಕೆ ತುತ್ತಾಗಿ ಹೋಗಿದ್ದ.ರಾಜ್ಯ, ಹೊರರಾಜ್ಯದ ಹಲವಾರು ಆಸ್ಪತ್ರೆಗಳನ್ನು ಸುತ್ತಿ ಕೊನೆಗೆ ಸಾವಿನ ದ್ವಾರಬಾಗಿಲಿಗೆ ಬಂದು ನಿಂತಿದ್ದ. ಅಕ್ಕಪಕ್ಕದಲ್ಲಿನ ಮಂಚಗಳ ಮೇಲೆ ಇರ್ವರ ಆರೈಕೆಯನ್ನು ಸಮನಾಗಿ  ಅವರಿಬ್ಬರ ಹೆಂಡತಿಯರು ನೋಡಿಕೋಳ್ಳುತ್ತಿದ್ದರು.ವಿಧವೆ ತಾಯಿ ತನ್ನ ಗಂಡನ ಹಾಗೂ ಸೌಭಾಗ್ಯವತಿ ತನ್ನ ಹೆಂಡತಿ ಅವನ ಆರೈಕೆಯನ್ನು ನೋಡಿಕೋಳ್ಳುತ್ತಿದ್ದಳು.

        ಈಗ ಇಡೀ ಊರಲ್ಲಿ ಒಂದೆ ಗುಲ್ಲು. ಪಾಪಣ್ಣ ತೀರಿಹೋದ ಮೇಲೆ ಅವನ ಹೆಂಡತಿಗೆ ಯಾರು ವಿಧವಾ ಪಿಂಚನಿಯನ್ನು ಮಾಡಿಸಿಕೊಡುತ್ತಾರೆ? ಆವಾಗ ಒಂದಿಷ್ಟು ಜನ ಅಯ್ಯೋ ಸುಮ್ಮನಿರಿ ನಿಮಗೆ ಗೊತ್ತಲ್ಲ,ಪಾಪಣ್ಣ ಯಾರು ಅಂತ,ಬಹುಶ್ ಆಗಲೆ ಮಂಜುರು ಮಾಡಿಸಿದ್ದರು ಮಾಡಿಸಿರಬಹುದು ಎಂತೆಲ್ಲ ತಮ್ಮತಮ್ಮಲ್ಲಿಯೆ ಮಾತನಾಡಿಕೋಳ್ಳಲು ಶುರು ಇಟ್ಟುಕೊಂಡಿದ್ದರು.

       ಇತ್ತ ಪಾಪಣ್ಣನನ್ನು ನೋಡಲೆಂದು ಕಾಗದದ ವಿಧವೆಯರು,ವಿಕಲಚೇತನರು,ವಯೋವೃದ್ಧರು ತಂಡೋಪತಂಡವಾಗಿ ಬರಲತ್ತಿದರು ನಾಲ್ಕು ಮರುಕದ ಮಾತನ್ನಾಡಿ ಹೆಂಡತಿಗೆ ಸಾಂತ್ವನ ಹೇಳಿ ಹೋಗುತ್ತಿದ್ದರು.ಈಗ ಪಾಪಣ್ಣನ ಅರಿವಿನ ಕಣ್ಣು ಎಚ್ಚರಗೊಂಡಿದೆ ಕೆಟ್ಟಮೇಲೆ ಬುದ್ಧಿ ಬಂತು ಎನ್ನುವ ಹಾಗೆ..!!ಈಗ ಪಾಪಣ್ಣಗೆ ಕಾಡುತ್ತಿರುವ ಪ್ರಶ್ನೆಗಳು ಒಂದೇ ಎರಡೇ???ನೀತಿ ಮರೆತು ಅನೀತಿಯ ಹಾದಿಯಲ್ಲಿಯೆ ಜೀವನ ಕಳೆದ ಪಾಪಣ್ಣ, ಅಪ್ಪ ಬದುಕಿರುವಾಗಲೆ ತಾಯಿಯನ್ನು ವಿಧವೆ ಮಾಡಿದ . ಜೀವಿತ ಅಪ್ಪನ ಮರನಾನಂತರ ಬರುವ ಪಿಂಚನಿ ಹಣದಿಂದ ಅಪ್ಪ ಸಾಯಿವ ಮೊದಲೆ ತಾ ಸತ್ತು, ಅದೇ ಹಣದಲ್ಲಿ ಶವಸಂಸ್ಕಾರವನ್ನು ಮಾಡಿಸಿಕೊಂಡ.ಊರಿಗೆಲ್ಲ ತಿಥಿ ಊಟ ಮಾಡಿಸಿದ.ಕಾಲನ ಕೈಯಲ್ಲಿನ ಬೊಂಬೆಗಳು ನಾವು ಅಂಥ ಇಡೀ ಹಳ್ಳಿಗೆ ಸತ್ತು ಸಾರಿದ..!!!

ಸಿ.ಎಸ್.ಮಠಪತಿ

No comments:

Post a Comment