Sunday 3 June 2012

ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾನಲ್ಲಿ ಮೂರು ಜನರ ಪಾಲು..





        ಅವು 2004ರ ಮಧ್ಯದ ದಿನಗಳು,ಆಗ ತಾನೆ ನಾನು ಮನೆಯಿಂದಾಚೆಗೆ ಬೆಳೆದು ಬಂದು ಹೆಚ್ಚುಕಡಿಮೆ ನಾಲ್ಕುವಸಂತಗಳು ಭೂತಕಾಲವನ್ನು  ಸೇರಿಯಾಗಿತ್ತು. ಚಿಕ್ಕವಯೋಮಾನದಲ್ಲಿಯೇ ಬದುಕಿನ ಒಂದಷ್ಟು ದಟ್ಟ ದರಿದ್ರ ಮುಖಗಳನ್ನು ಸಹ ನೋಡಿಯಾಗಿತ್ತು. ಬದುಕಿನಲಿ ಏನನ್ನಾದರು ಸಾಧಿಸಬೇಕೆಂಬ ಬೇತಾಳನನ್ನು ಹೆಗಲೇರಸಿಕೊಂಡು ಸುತ್ತಾಡುತಿದ್ದ ದಿನಗಳು. ಸಾಮಾಜಿ,ಕೌಟುಂಬಿಕ ಮತ್ತು ಸಂಬಂಧಗಳಿಂದಾದ ಸೋಲುಗಳಿಂದ ತತ್ತರಿಸಿ ಏಕಾಂಗಿತನದ ಬಾಳಿಗೆ ಅಂಟಿಕೊಂಡಿದ್ದೆ. ಅರಮನೆಯ ಮಲ್ಲಿಗೆಗಳೇ ಅರಳಿ ಬಾಡಿ ಹೋಗುವಾಗ ನಾನು ಬೀದಿಯ ಚೆಂಡ ಹೂ ನನ್ನ ಪಾಡೆನು?? ಅರಳುವದು ಬೇರೆಯ ಮಾತು ಅದಕ್ಕಿಂತ ಮೊದಲೆ ಯಾರದೋ ಕಾಲಿಗೆ ಆಟಿಕೆಯಾಗ ಬಹುದಲ್ಲವೆ,ಎಂಬ ಭಯದಲ್ಲಿಯೇ ಹುಬ್ಬಳ್ಳಿ ನಗರದಲ್ಲಿ ಪದವಿ ವಿದ್ಯಾಬ್ಯಾಸಕ್ಕಾಗಿ ಏನೆಲ್ಲ ಕಷ್ಟ ಕಾರ್ಪನ್ಯದಿಂದ ಸುಮಾರು 40,000/- ಹೊಂದಿಸಿ ಕಾಲೇಜು ಶುಲ್ಕ ಕಟ್ಟಿದೆ.ಮನೆಯ ಅಡಿಪಾಯ ಹಾಕಿದಾಕ್ಷಣ ಅದಕ್ಕೆ ನಾವೊಂದು ಗೃಹ ಎನ್ನ ಬಹುದೆ? ಮತ್ತೆ ಅದೇ ಹಣಕಾಸಿನ ತೀಕಲಾಟ ಹೇಗೋ ಆ ಹಣಕಾಸಿನ  ಏರಿಳಿತಕ್ಕೆ
 (Financial crisis)ಗೆ ಹೊಂದಿಕೊಂಡು ಬಿಟ್ಟೆ.


        ಅಲ್ಲಿ ಒಂದು ಔಟ ಹೌಸ್ ಮಾಲಿಕರ ಮನೆಯಲ್ಲಿ ಕೇವಲ ಇಬ್ಬರೆ ಜನ ವಾಸವಾಗಿದ್ದರು, ಅರವತ್ತು ದಾಟಿದ ದಂಪತಿಗಳು.ಅವರು ಔಟ ಹೌಸ್ ನನಗೆ ಕೇವಲ ನಾನೂರು ರೂಗೆ ಬಾಡಿಗೆ ನೀಡಿದರು, ಅದರ ಹಿಂದಿನ ದು(ದೂ)ರಾಲೋಚನೆ ಅಂದರೆ ನಾನು ಅವರ ಮನೆಯ ಕಾವಲಿನ ಜತೆಗೆ ಅಲ್ಲಿ ಉಳಿದುಕೊಳ್ಳಬೇಕಂಬ ಸತ್ಯ ಆಮೇಲೆ ಅರ್ಥವಾಯ್ತು.ಆ ನಾನೂರು ಬಾಡಿಗೆ ಭರಿಸುವದೇ ನನಗೆ ಕಷ್ಟ ಎನಿಸಿತು ಆವಾಗ ಆ ಮೂರ್ತಿ ಆಂಟಿಯಿಂದ ಪರವಾಣಿಗೆ ಪಡೆದು ಮತ್ತೆ ನನ್ನ ಜತೆಗೆ ಮತ್ತಿಬ್ಬರ ಸ್ನೇಹಿತರನ್ನು ಸೇರಿಸಿಕೊಂಡೆ.

        ಅಡುಗೆ ಮಾಡುವ ಕಲೆ ನನಗೆ ಚೆನ್ನಾಗಿ ಗೊತ್ತಿತ್ತು ಅದರಿಂದ ನನ್ನ ಆ ವಾಸ ಸಂಗಾತಿಗಳು ಬೇಗನೆ ನನ್ನ ಜತೆ ಹೊಂದಿಕೊಂಡರು.ನಾನು ಮಾಡಿ ಬಡಿಸುತ್ತಿದ್ದ ಒಂದೊಂದು ಮೆನು ಅವರಿಗೆ ಅತೀ ಇಷ್ಟವಾಗಿ ಹೊಯ್ತು. ದಿನವೆಲ್ಲ ಕಾಲೇಜು ಮುಗಿಸಿ ರಾತ್ರಿ ಹೊತ್ತು ಕೆಲಸಕ್ಕೆಂದು ಸೇರಿಕೊಂಡೆ ಅದು 24*7 ಔಷಧ ಮಳಿಗೆ ಅಲ್ಲಿ ಒಂದು ದಿನ ನಾನು ಮರುದಿನ ನನ್ನ ಗೆಳೆಯ ಪ್ರಸಾದ್ ಹೀಗೆ ಇಬ್ಬರು ಆ ಕೆಲಸವನ್ನು ಹಂಚಿಕೊಂಡೆವು, ಅದರಿಂದ ನಮಗೆ ಸಂದಾಯವಾತ್ತಿದ್ದ ಸಂಬಳ ರೂ-3000., ಅದನ್ನೆ ಸಮಪಾಲಾಗಿ ಹಂಚಿಕೊಳ್ಳುತ್ತಿದ್ದೆವು.


        ಪಠ್ಯದ ಜತೆಗೆ ಪಠ್ಯೇತರ ಬರಹಗಳನ್ನು ರಾತ್ರಿಯಲ್ಲ ಓದುತ್ತ ಕುಳಿತುಕೊಂಡು ಬಿಡುತ್ತಿದ್ದೆ.ಆಹಾ ಆ ಸಾಹಿತ್ಯ ಓದುವಿಕೆಯಲ್ಲಿ ಸಿಗುತ್ತಿದ್ದ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.ಅವುಗಳ ಏರಿಳಿತದಲಿ ಉಯ್ಯಾಲೆ ಆಡಿದ ಅನುಭವ ಹೀಗೆಯೆ ನಾಲ್ಕು ವರ್ಷ ನನ್ನ ಪಯಣ ಒಂದೆ ದಾರಿಯಲ್ಲಿ ಸಾಗಿ ಹೊಯ್ತು.

        ಸಂಜೆ ಅಪರೂಪಕ್ಕೊಮ್ಮೆ ಸುತ್ತಾಡಲು ಹೋಗುತ್ತಿದ್ದ ನಾವು ಎಲ್ಲರಂತೆ ಹೊರಗಡೆ ಏನಾದರು ತಿನ್ನೋಣ ಅಂದುಕೊಂಡಾಗಲೆಲ್ಲ ಕೂಡಿಸಿ,ಕಳೆದು,ಗುಣಿಸಿ,ಬಾಗಿಸಿ ಕೊನೆಗೆ ಚಹಾ ಕುಡಿಯೋಣ ಎಂಬ ಒಕ್ಕೊರಲಿನ ತಿರ್ಮಾಣಕ್ಕೆ ಬರುತಿದ್ದೆವು. ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾನಲ್ಲಿ ಮೂರು ಜನ ಕುಡಿಯುತ್ತಿದ್ದೆವು ಅಂದರೆ,’’ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾನಲ್ಲಿ ಮೂರು ಜನರ ಪಾಲು”…!!! ಜೇಬಿನಲ್ಲಿ ಒಂದೊಂದು ರೂಪಾಯಿಗು ಘನವಾದ ಬೆಲೆ ಸಂದಾಯಗುವಂಥ ಸಮಯ ಅದು..!! ಈಗ ಮಾಸಿಕ 30 ರಿಂದ 40 ಸಾವಿರ ದುಡಿಯುತ್ತಿರುವ ನನ್ನಲ್ಲಿ ಆಗಿನ ದಿನಗಳಲ್ಲಿ ಇದ್ದಂಥ ಆಶೆಗಳಿಲ್ಲ, ಸುಂದರ ಕನಸುಗಳಿಲ್ಲ, ಬದುಕು ಮಡುಗಟ್ಟಿದೆ ಹಣದಾಶೆಯ ಮಸಣಸದೃಶ್ಯ ವಾಂಛೆಯ ನೆರಳಿನಡಿ.ಮತ್ತೆ ನಾನು ನಾನಾಗಬೇಕು ನನ್ನಲಿ ನನ್ನನು ನಾ ಕಾಣಲು…!!!

       ಅಂಥ ಚಿಕ್ಕ ಕೊಠಡಿ, ಒಂದು ಸ್ಟೌವ್, ಸುಂದರ ಕನಸುಗಳು, ಪ್ರೀತಿಸುವ ಗೆಳೆಯರು,ಒಂದು ಸೌಂಡ್ ಸ್ಲೀಪ್,
ಮನಸನ್ನು ಘಾಸಿಗೊಳಿಸದ ಅನುಭವಗಳು,ಅರ್ಧ ಕಪ್ ಚಹಾ, ಪ್ರಜಾವಾಣಿ ಡೆಕ್ಕನ್ ದಿನ ಪತ್ರಿಕೆಗಳು,ತೊಳೆದು ಹಾಕಲು ಬಹಳ ಅನಿಸದಷ್ಟು ಧಿರಿಸುಗಳು,ಮೂರು ತಿಂಗಳಿಗೊಂದು ಸಿನೆಮಾ, ಸೆಲ್ಪ್ ಪ್ರಿಪೆರಡ ಆಹಾರ...ಹಾಗೆ ಚಿಕ್ಕ ಆಶೆಗಳ ದೊಡ್ಡ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಮತ್ತೆ ನಾ ಕಾಣಬೇಕು ನಿನ್ನನು ಓ ನನ್ನ ಬಡತನದ ಬದುಕೆ ನಿನ್ನಲ್ಲಿ ಸಿರಿತನದ ಸುಖವನ್ನು ಈ ಹಣದ ಮನೆಯಲಿ !!!

ಸಿ.ಎಸ್.ಮಠಪತಿ

No comments:

Post a Comment