Thursday 16 August 2012

ನನ್ನ ಮನೆ....



ಆ ಗುಡಿಸಲೊಂದೆನಗೆ ಬರೀ ಆವಾಸವಲ್ಲ
ಬದುಕು ಜಾಗರಣೆಯಲಿ ನಿಜ ಉಲ್ಲಾಸವನೀಡಿದ
ಶಾಂತ ನಿಸರ್ಗದಿ ತಲೆಯೆತ್ತಿ ನಿಂತಿದ್ದ
ಗಾಂಭೀರ್ಯ ಚೆಂದಾದಿ ಚೆಲುವ ಸೌಧ..!!

ಊರ ಸೀಮೆಯಲಿ ಹರಡಿಕೊಂಡಿತ್ತು
ಎತ್ತ ಓಡಾಡಿದರು ಅಂತರಂಗ ಬಹಿರಂಗದಾಟಗಳಿಗೆ
ಒಂದೆ ಒಳಾಂಗಣ;ಭಾರವಲ್ಲದ ಸೂರನು ಎದೆಸೆಟಿಸಿ ಹೊತ್ತ
ಕಂಭಗಳು,ಕತ್ತಲಿ ಪಂಚಾಂಗ ಹಾಲು-ಮೊಸರನು ಹೊರುವ
ನೆಲುವು,ಅಲ್ಲಲಿ ಹರಿದು ಹಚ್ಚಡವಾದ ಒಳ-ಹೊರ ಧಿರಿಸುಗಳು
ನೇಣಿಗೆ ಶರಣು; ಹುಟ್ಟಿ ಬೆಳೆದು ಮರಣಾದಿ ಬದುಕನು
ಮನೆಯಲ್ಲಿಯೇ ಕಂಡುಕೊಂಡ ತನ್ಮಯತೆಯಲಿ..!!!

ಮಬ್ಬುಗತ್ತಲಿನ ಪಡಸಾಲೆಯ ಚಿಮನಿ
ಎಲ್ಲೆಲ್ಲೊ ಬೆಳಕನು ಚೆಲ್ಲುವ ಸಾಹಸದಲಿ ಸೋತು
ದಿಗಿಲಿಗೆ ತಲೆಬಾಗಿ ತನ್ನನೆ
ತಮಸ್ಸಿನಲಿ ನಿಲ್ಲಿಸಿ ಒಂದಷ್ಟು ಸತ್ಯಸಾರುತ್ತಿತ್ತು
ಮನ ಮನೆಯ ಗೋಡೆಗಳ ಮೇಲೆ..!!
  
ಮೂಲೆಯಲೊಂದೊಲೆ ಉರುವಲೊಂದು
ದಹನ ಚಿತಾಗಾರದಿ ಬೆಂದು ಹಸಿದ ಉದರಕೆ
ಅನ್ನವ ನೀಡಿದ ನೆಮ್ಮದಿಯಲಿ
ಮೆತ್ತಗೆ ಬೂದಿಯಾಗಿ
ಸಾವಲ್ಲು ಹೇಳುತ್ತಿತ್ತು  
ಸತ್ಯದ ಸಾರವನ್ನು.

ನಿನ್ನ ನೆನೆದರೆನಗೆ  ದುಗುಡ ಇಮ್ಮಡಿಸಿ
ಮತ್ತೆ ಬಯಸುತಿದೆ ನಿನ್ನಾಶ್ರಯ
ಹೆಜ್ಜೆಯನ್ಹಾಕುವ  ಆಸೆ, ಆದರೆ ಬಲವು
ಇಲ್ಲ ಅಂತಬಹಿರಂಗಾದಿಗಳಲ್ಲಿ; ಅಧೀರಗೊಂಡಿವೆ
ನರನಾಡಿಗಳು ಬರಲಾಗದು ತೊಳ್ತೆಕ್ಕೆಗೆ,
ಅಂಗಾದಿ ಅಂಗಗಳು ಬೆಳ್ಳಿ ತೊಟ್ಟಿಲಲಿ ಸುಕ್ಕಿಡಿದಿವೆ
ನಿನ್ನ ಸಾಕ್ಷಾತ್ಕಾರವ ನೆನೆಯುತ ತಟ್ಟುತಿವೆ
ವಿಷಮ ಬಾಳ್ವೆಯ ಮನೆಯ ಬಾಗಿಲನು..!!!

ಸಿ.ಎಸ್.ಮಠಪತಿ


1 comment:

  1. ಗುಡಿಸಿಲಿನ ಚಿತ್ರಣ ಬಹಳ ಚೆನ್ನಾಗಿ ಮೂಡಿಬಂದಿದೆ. ಪದಗಳ ಜೋಡಣೆ, ಭಾವನೆಗಳ ನಿರೂಪಣೆ ಬಹಳ ಮನ ಮೋಹಕವಾಗಿದೆ. ಆ ಆವಾಸವನ್ನು ನೀವು ಎಷ್ಟು ಪ್ರೀತಿಸುತ್ತಿರಿ ಎಂದು ಪರಿಣಾಮಕಾರಿಯಾಗಿ ಚಿತ್ರಿಸಿದ್ದೀರಿ. ಹೀಗೆ ಬರೆಯುತ್ತಿರಿ.

    ReplyDelete