Wednesday 29 August 2012

ಎದೆಯಾಳದ ಹನಿಗಳು ಭಾಗ-1


ವಿರಹ

ನನ್ನ ವಿರಹ 

ಧಾರೆಯಲಿ
ಕೊಚ್ಚಿಹೋದಿತು
ನಿನ್ನನೆನಪು,
ಅಪ್ಪಿದ ನೆನಹು
ಮುಪ್ಪಾಗಿ
ಮುದುಡಿ
ಹೋಗಲು,
ಮತ್ತೆಲ್ಲಿ
ನೆಟ್ಟು ಪೊಸಿಸಲಿ
ಪುಟ್ಟ ಸಸಿಯಾ...

ಮಾಯಾಗಾರ
ಹುಟ್ಟಿಸುವ ದೇವರು
ಹೊಟ್ಟೆಗೆ ಹುಲ್ಲನ್ನಂತು 
ತಿನ್ನಿಸುವದಿಲ್ಲ, 
ಆದರೆ ಹುಲ್ಲು,ಕಾಡು,
ಮುಳ್ಳುಗಳಲ್ಲೆಲ್ಲ ಮುಲಾಜಿಲ್ಲದೆ
ಅಲೆದಾಡಿಸುತ್ತಾನೆ ಹುಲ್ಲಲಿ
ಅಡಗಿರುವ ಅನ್ನವನ್ನು

 ಹೆಕ್ಕಿ ಪಡೆಯಲು!!!

ಜತೆಗಾರ
ದಾರಿ ತಪ್ಪಿದ ಅಂಧ
ಬದುಕಿನಲಿ
ಭಯದಿ ಪಲಾಯನ 

ಮಾಡುವದು
ಜತೆಗಾರ ಆತ್ಮ ಬಲ...

ಶಕ್ತಿ
ಸಹನೆ ನನ್ನ
ದೌರ್ಬಲ್ಯವಲ್ಲ
ಅದು ನಿನ್ನ ಬರುವಿಗಾಗಿ
ಜೀವ ಜನಕ ನೀಡುತ್ತಿರುವ
ಆಗಾಧವಾದ ಶಕ್ತಿ..!!!

ಅವಳು..
ನಾನೇನು ಅಲ್ಲ
ಎನ್ನುತ ನನ್ನಲಿ
ಲಗ್ಗೆ ಇಟ್ಟ ನೀನು
ಇಂದು ಎಲ್ಲವು ನೀನಾದ
ಪರಿಗೆ ನಾನೇನು ಹೇಳಲಿ.

ಅರ್ಧಾಂಗಿ
ನೀನು ಜೀವನ 

ಜತೆಗಾರ್ತಿಯಾಗಿ
ಬಂದಾಗ ಅಂದುಕೊಂಡೆ
ಎಲ್ಲದರಲ್ಲೂ

ಪಾಲು ಗಾರ್ತಿಯಾಗಿರುತ್ತೀಯಾ ಎಂದು,
ಆದರೆ,ನೀನು ಕೇವಲ ನಗು-ನಲಿವನು ಹೀರಿ
ದೂರಾದ ಮೇಲೆ ಗೊತ್ತಾಯ್ತು ನೀನು
ಕೇವಲ ಅವಕಾಶವಾದಿ ಅರ್ಧಾಂಗಿ ಎಂದು….!!

ಬದುಕು-ಬಣ್ಣ
ಬಣ್ಣ- ಬಣ್ಣದ ಕನಸುಗಳ
ಹಿಂದಿನ ಪಯಣವೆ ಜೀವನ ಎಂದರಿತು,
ದರಿದ್ರ ಬದುಕಿನಲಿ ಬಣ್ಣ- ಬಣ್ಣದ ಅಂಗಿಯ
ತೊಟ್ಟು ನರ್ತಿಸಿದೆ…

ಸೂರ್ಯ-ಶಿಕಾರಿ
ಸೂರ್ಯನು ಸಹ ನನ್ನಂಥೆ
ಬರೀ ವಿಷಾನುಭವಗಳನ್ನು ನುಂಗಿ
ಇಂದು ಎಲ್ಲವನು ಮರೆತು ಕೇವಲ
ಉರಿಯುವದನ್ನು ಮಾತ್ರ ಉಳಿಸಿ ಕೊಂಡಿದ್ದಾನೆ.

??????
ಅಪ್ಪನ ಹಣೆ ಮುತ್ತು
ಅಮ್ಮನ ಕೈ ತುತ್ತು
ಅಕ್ಕ-ಅಣ್ಣನ ಉದಾಸೀನತೆ
ತಂಗಿ-ತಮ್ಮನ ಅವಲಂಬಣೆ
ಎಲ್ಲವು ಆಧುನಿಕ
ಬದುಕು ಬಿರುಗಾಳಿಯ ರಭಸಕೆ
ಶಾಶ್ವತವಾಗಿ ಅಸ್ತಮಿಸುತ್ತಿರುವ
ಜೀವನದ ನೈಜ ಖುಷಿಗಳು...

ಬಣ್ಣ
ಬಣ್ಣ- ಬಣ್ಣದ ಕನಸುಗಳ
ಸಾಧನೆಯ ಹಾದಿಯಲಿ

ನಡೆಯುತ್ತಲೆ
ಜೀವನದ ನೈಜ ವರ್ಣವನ್ನೆ 

ಮರೆತು ಹೋದೆ.

ಮರೆತ ಗೆಳತಿ
ನೀನ್ಹೇಳಿದ ಮಾತು,
ನಿನ್ನ ಒಂದೊಂದು ಕುಡಿ ನೋಟ,
ನನ್ನೇದೆಗೆ ಒರಗಿ ಉಸುರಿದ
ತಲ್ಲಣಿಸುವ ಬಿಸಿ-ಉಸಿರು  
ಎಲ್ಲವು ನನ್ನವೆ,
ಒಂಟಿಸಾವಿನ

ಜತೆಗೆ ಬರುವ
ಸಂಗಾತಿಗಳು..!!!

ಹರಿದ ಚೆಲುವೆ..
ಏನು ಇಲ್ಲ ಎನ್ನುತಲೆ 

ನನ್ನ ಹೃದಯಕೆ
ಲಗ್ಗೆಯಿಟ್ಟ ಚೆಲುವೆ,
ರುಧಿರ ಜತೆಯಾಗಿ 

ಹರಿದರಿದು
ದೇಹದ ಕಣ-ಕಣವನು
ಆವರಿಸಿ ಇಂದು ಅವಳೆ 

ನನಗೆಲ್ಲವಾಗಿ
ಬಿಟ್ಟಳು..!!

ಪ್ರಶ್ನೆ
ನಾನು ಬದುಕುಳಿಯಬೇಕು
ನನ್ನನು ಸಾಯಿಸುತ್ತಿರುವ
ನನ್ನ ಗೆಳತಿಯ ಎಲ್ಲ 

ನೆನಪುಗಳನ್ನು ಮರೆತು..!!

ಚಿಂತೆ
ನೀರವ ಮೌನದಲಿ

ಮೈನೆರೆದು
ಘನಿಭವಿಸಿ ಅಸಹ್ಯ

ಆಗು ಹೋಗುಗಳಿಂದ
ತಬ್ಬಿಸಿ,ಮುದ್ದಿಸಿ,ಅಪ್ಪಿ 
ಸುಖಿಸಿ ಹುಟ್ಟುವುದೆ ಚಿಂತೆ..!!

ಪಕ್ವತೆ
ಜಗದ

ಎಲ್ಲ ಮನುಜರಲ್ಲಿಯು 
ಪರಿಪಕ್ವತೆ
ಕಾಣುವುದು ಬದುಕಿನ ಸಾವಿನ
ಮುಂದಿನ ಅಂತ್ಯದ ದಿನಗಳಲ್ಲಿ..!!

ಸ್ನೇಹ
ಸೆಳೆತದಿ ಬಂಧಿಯಾಗಿ
ಉಸಿರಲಿ ಬೆರೆತು
ನೆನಪಲಿ ನಲಿದಾಡಿ
ಬುದುಕಲಿ
ಹಾಸುಹೊಕ್ಕಾಗಿ
ನೋವುನಲಿವಲಿ

ಭಾಗಿಯಾಗಿರುವದೆ
ಸ್ನೇಹ..!!!

 
ನೋಟ
ನಾ ಕಳೆದು ಹೋದೆ ಅವಳ 

ನಾಟಕೀಯ ಮಾಯಾ ಜಾಲದ 
ಕಣ್ಣೋಟಕೆ, ಆ ಕಣ್ಪರದೆ
ಹಿಂದಿನ ಮರ್ಮವನರಿಯದೆ.

ಮಾಯೆ
ನಾನೇನು  ಮಾಡಲಿ 
ಅವಳ ನೆನಪು
ಬಂದಾಗಲೆಲ್ಲ ಮನ ಕರಗಿ 
ನೀರಾಗಿ,ನದಿಯಾಗಿ
ಅವಳತ್ತ ಹರಿಯುತ್ತದೆ
ಜಗದ ಎಲ್ಲ ಜಂಜಡವ ಮರೆತು

ಗಾಯ
ನನ್ನ ಹೃದಯದ ನೋವನ್ನು

ಹೇ ಖಾಲಿ ಕಾಗದವೆ ನಿನ್ನೆದೆಯ 
ಮೇಲೆ ಗೀಚಿದಾಕ್ಷಣ ಆ ನೋವು ಮಾಸಲ್ಲ!!
ಹಳೆಯ ಗಾಯದ ಹಕ್ಕಳಿಯ
ಕೀಳಿಸಿ ಮತ್ತೆ ನೋವಾಗಿಸುತ್ತೆ

ಆಶೆ
ನಾನು ಸಾಯಬೇಕು 
ಅವಳ  ಬೇಕೆನ್ನುವ ನೆನಪಿನ
ಸ್ವಾರ್ಥ ಪಾಪದಲಿ
ಅವಳು ಸಾಯಬೇಕು

ನನ್ನ ಪ್ರೀತಿಯ ವಂಚನೆಯ
ವಂಚಕದ ಪಾಪದಲಿ
ಆಗಲಾದರು ನಾವು 
ಸಂದಿಸಬಹುದಲ್ಲವೆ
ಸತ್ತು ನರಕದಲಿ…..

ಮಸಣದ ಮಾತು
ನಿನಗೆ ನನ್ನ ಕೂಗು 

ಕೇಳದಿದ್ದರೆ ಬಾ ಮಸಣಕೆ,
ಅಲ್ಲಿ ಗೊರಿ ಜಗುಲಿಯ
ಪಿಸುಮಾತು ಸಾಕು ಶಬ್ಧ ಸಾಕಾರಕೆ

ಬಾಲ್ಯ
ಚಿಂತೆ ಇಲ್ಲದೆ ಸಂತೆಯಲ್ಲಿಯು
ಆಡಿ ಕುಣಿದು,
ಜೇಬಲ್ಲಿ ಕಾಸಿಲ್ಲದೆ ಜಾತ್ರೆಯಲಿ

ನಗುತ ಸುತ್ತಾಡುವ ಸುಂದರ ದಿನಗಳು..

ದೀಪ
ನಿನ್ನ ಮೋಸದ ಬಿರುಗಾಳಿ 

ಬೀಸುವ ಮುನ್ನವೆ
ನನ್ನ ವ್ಯಾಮೋಹದ

ಒಲವ ದೀಪ ಆರಿ ಹೋಗಿದೆ
ಅರಿವಿನ ಉಸಿರುಗಟ್ಟುವಿಕೆಯಿಂದ

ಮೌನ
ನೀರವ ಮೌನದಲಿನ 

ಪದಗಳಷ್ಟೆ ಸಾಕುನನ್ನ 
ಬದುಕು ಕಾದಂಬರಿಗೆ!!

ಮಾತು
ಹೇಳದೆ ಉಳಿದಿಹ

ಕಹಿ ಮಾತೋಂದಿದ್ದರೆ
ಹೇಳಿಬಿಡು ನಮ್ಮಿ ಪ್ರೀತಿಯ 

ರಭಸದಲಿ ಕೊಚ್ಚಿ ಹೋಗಬಹುದು….
ದರ ವೇಗ ಇಳಿಯುವ
ಮೊದಲು….

ಕನಸು
ನನಸಿನ

ಹೆರಿಗೆಯ 
ಸುಂದರ
ಹಸುಗೂಸೆ ಕನಸು..

ನಂಬಿಕೆ
ಉತ್ಕೃಷ್ಟ 

ನಿಗೂಢತೆಯ
ಕಟ್ಟ ಕಡೆಯ 

ವಾಂಛೆಯೆ ನಂಬಿಕೆ

ನಾವು
ನಾವು ಯಾವಾಗಲು

ಯಾವುದರ
ಬಗ್ಗೆ ಮಾತಿನಲಿ ವಿರೋಧ

ಭಾವವ್ಯಕ್ತ ಪಡಿಸುತ್ತಿರುತ್ತೇವೊ,
ಅಂತರ್ಗತವಾಗಿ 

ನಿಜವಾಗಲು ನಾವು 
ಅದೆ ಆಗಿರುತ್ತೆವೆ.

ಜೀವನ
ಹುಟ್ಟು ಪಡೆಯುವದು
ಪ್ರೀತಿ ಆಗೋದು
ಸ್ನೇಹ ಮಾಡೋದು
ಜೀವನ ಕಟ್ಟಿಕೋಳ್ಳೋದು 

ಸಾವು ಅದಾಗಿಯೇ 
ಅಪ್ಪಿಕೋಳ್ಳೋದು

ಬರಹ
ನಾನು ಬರೆಯ 

ಬೇಕೆಂದಾಗಲೆಲ್ಲ 
ಶಬ್ಧಗಳೆ ಬರುವದಿಲ್ಲ,
ಅವು ಸವಿಭಾವ ಲಹರಿ
ಅದಕ್ಕೆ ಅನುಭವದ 

ನಿನಾದ ಮೊಳಗಲೆಬೇಕು

ಪ್ರೀತಿ
ಅತಿರೇಕದ ಪ್ರೀತಿ

ನೋವು ಕೊಡುತ್ತದೆ 
ಆತ್ಮೀಯ ಪ್ರೀತಿ ನಲಿವಿನ
ಆಹ್ಲಾದ ನೀಡುತ್ತದೆ.

ಭ್ರೂಣ
ಜನ್ಮಾಂತರದ ಬದುಕು
ಇಷ್ಟೊಂದು ದುರ್ಗಮ 

ಎಂದು ಭ್ರೂಣಕ್ಕೆ
ಆವಾಗಲೆ ದೇವರು ಅರಿಯು 

ಶಕ್ತಿಕೊಟ್ಟಿದ್ದರೆ,
ಎಷ್ಟೊ ಭ್ರೂಣಕ್ಕೆ ಗರ್ಭವೆ
ಮಸಣದ ಮಂದಿರವಾಗಿರುತ್ತಿತ್ತು.

ಮಳೆ,ಇಳೆ
ಕಾರ್ಮೋಡಗಳು 

ತಾವು ಅತ್ತು
ಸುರಿಸುವ ಮಳೆಹನಿಯ 

ದುಃಖವನ್ನು
ಇಳೆಯ ಕಳೆಯನ್ನು 

ನೋಡಿ ಮರೆಯುತ್ತವೆ.

ಆದಿ
ಜಾಣ್ಮೆಯ 

ಹುಟ್ಟುಮನೆಯೆ 
ಅರಿವಿನ ದಡ್ಡತನ.

ಕ್ಷಣಹೊತ್ತು
ಕ್ಷಣಹೊತ್ತು ಪ್ರೀತಿ,
ಮಮತೆಯನು
ಕಳೆದುಕೊಂಡ ಮನುಜ 

ತಾನು ಏಕಾಂಗಿ ಎಂದು 
ತಡವರಿಸಿ,
ತನ್ನ ಆದಿ ಅಂತ್ಯದ 

ಕಟು ಸತ್ಯವನ್ನು 
ಮರೆಯುವಷ್ಟು
ದಡ್ಡನಾಗಿ ಬಿಡುತ್ತಾನೆ

ಸಂಗಾತಿ
ಕೇವಲ ಹೊವಿನಲ್ಲಿನ 

ಮಕರಂಧ ಹೀರುವ ದುಂಬಿ.

ಪಲ್ಲಕ್ಕಿ
ಕಂಬನಿ
ಯೆ
ದುಗುಡ,ದುಮ್ಮಾನಕೆ
ಮೆರವಣಿಗೆಯ ಪಲ್ಲಕ್ಕಿ.

ಪ್ರೀತಿಯ ಹಣತೆ...
ಅಂಧಕಾರವ 

ಶಪಿಸುವದಕ್ಕಿಂತ 
ದೀಪ ಹಚ್ಚುವುದೇ ಲೇಸೆಂದು
ಅವಳ ಪ್ರೀತಿಯ
ದೀಪದ ಕೆಳಗೆ ಬೀಡು ಬಿಟ್ಟೆ,
ಅಲ್ಲಿ ನಾನು ಮತ್ತು ನನ್ನ
ಕನಸುಗಳು ಬೆಂದು
ಕರಕಲಾದ ಮೇಲೆ ಗೊತ್ತಾಯ್ತು

ಅದು ಬರಿ ಬೆಳಕನು 
ಪಸರಿಸುವ ದೀಪವಷ್ಟೆಯಲ್ಲ 
ಉರಿಯುವ ರುದ್ರ ನರ್ತನದ
ಕಾಳ್ಗಿಚ್ಚು ಅಂತ..!!!

ಅನಿರೀಕ್ಷೀತ
ಅನಿರೀಕ್ಷೀತವಾದ 

ದೃಷ್ಟಿ ಸಮ್ಮಿಲನದಿಂದ
ಸೃಷ್ಟಿಯಾದ 

ನವಜಾತ ಶಿಶುಗೆ 
ನಾನಿಟ್ಟ ಹೆಸರೆ
ಪ್ರೀತಿ….

ವಿಪರ್ಯಾಸ
ಒಂದು ಸಣ್ಣ ರಂಧ್ರವು

ದೊಡ್ಡ ಹಡುಗನ್ನು
ಮುಳುಗಿಸ ಬಹುದು 

ಎಂದು ಅರಿತಿದ್ದರು
ಪ್ರೀತಿಯ ಮೋಹದ

ಜಾಲಕ್ಕೆ ಸಿಕ್ಕು
ಹೃದಯದಲಿ ದೊಡ್ಡ

ಮೋರಿಯತೋಡಿ
ಬದುಕು ಕಟ್ಟಲು ನಿಂತೆ..!!!

ಪ್ರೀತಿಯ-ಅಂಗಡಿ
ಗುಂಡಾಡಿ ಜನ 
ಉಂಡು ಹೋದ ಮೇಲೆ
ಕೊಂಡು ತಂದ
ತರಕಾರಿ-ಸರಂಜಾಮಗಳ
ವೆಚ್ಚ ಲೆಕ್ಕಿಸುವ ಶೆಟ್ಟಿಯ ಹಾಗೆ…,
ನನ್ನವಳು ನನ್ನೆದನ್ನೆಲ್ಲ ದೋಚಿ 
ದೂರಾದ ಮೇಲೆ ಅರಿವಾಯ್ತು
ಅವಳು ನನ್ನ ಪ್ರೀತಿಯ
ಅಂಗಡಿಗೆ
ಕೇವಲ ಗಿರಾಕಿಯಾಗಿ 
ಬಂದಿದ್ದಳೆಂದು,
ಸಮಯ ಸಾಧಕ 
ಪ್ರೀತಿಯಂಬ  ನೋಟನ್ನು
ಕೈಯಲ್ಲಿಡಿದು…!!!   
     
ಪ್ರೀತಿ
ಪ್ರೀತಿ ಎಂಬುದು
ಹೃದಯ ಕಳೆದುಕೊಂಡು
ಗುರಿಯಿರದ ದಾರಿಯಲಿ 

ಗರಿ-ಗರಿ ಕನಸುಗಳೊಂದಿಗಿ
ಪಯಣ....!!!


ನಾವು
ನಮ್ಮ- ನಮ್ಮಗಳ ನಡುವೆ
ನಮ್ಮ-ನಮ್ಮಲ್ಲಿಯೆ 

ನಾವು-ನಾವಾಗಿಲ್ಲ ಇನ್ನು,
ಯಾರ-ಯಾರಲ್ಲೊ
ನಾವು ನಮ್ಮನ್ನು ಕಾಣುವದು
ಹೇಗೆ..!!


ಎಲ್ಲ ನಿನ್ನದೆ
ಜೀವನ ನಿನ್ನದು 
ತನು-ಉಸಿರು ನಿನ್ನದು
ನನ್ನೆಲ್ಲ ವಿಸ್ಮಯ ನಿನ್ನದು,
ನನ್ನದು,ನನ್ನದು ಬರೀ
ನೀ ಬಿಟ್ಟು ಹೋದ 
ಹಸಿ ನೆನಪು ನನ್ನದು..!!

ಹರಿದ ಕಂಬಳಿ
ಬದುಕೆಂಬ ಹರಿದ 

ಕಂಬಳಿಯಲಿ
ನರಳುತ
ಹಾಸುಹೊಕ್ಕಾಗಿ
ಮಲಗಿರಲು,
ಎಲ್ಲಿಂದಲೊ ಪ್ರೀತಿಯ
ಬಿರಿಗಾಳಿಯ ಬೀಸಿ
ಕೊಂಡೊಯ್ದಳಾ
ಅಳಿದುಳಿದ ನನ್ನಾಸ್ತಿಯ…!!!

ಅನಾಥ
ಪ್ರೀತಿಯ ನಡುಗಡ್ಡೆಯಲಿ ನಿಂತು
ಅರುಹಿದ ನನ್ನ ಅನಾಥ ಅಕ್ರಂದನ
ಪಕ್ಕದಲ್ಲಿಯೇ ಇದ್ದ ಜಾಣ ಕೆಪ್ಪ
ಗೆಳತಿಗೆ ಕೇಳಲೆಯಿಲ್ಲ.!

ಅಂಕೆ-ಶಂಕೆ
ಅಂಕೆ ಶಂಕೆ
ಬೇಲಿ ಕಟ್ಟಳೆಗಳಿಲ್ಲದ
ನನ್ನೆದೆಯ ಸಿರಿಯಲ್ಲವನು
ದೊಚಿ ಹೀಗೆಯೆ ಬಿಟ್ಟು ಹೋದಳು
ಬರೀ ಒಂದಿಷ್ಟು ಹೆಜ್ಜೆ ಕುರುಹುಗಳನು..!!

ಶರವೇಗ
ಅವಳು ಬಲು ಬಿರುಸಾಗಿ
ಮನದಂಗಳಕೆ
ಲಗ್ಗೆ ಇಟ್ಟಾಗಲೆ ಅಂದುಕೊಂಡೆ
ಮುಂದೊಂದು ದಿನ ಕಾದಿದೆ ದೊಡ್ಡ
ಆವಾಂತರವೆಂದು,
ಪ್ರೀತಿಯ
ಬೀಜವನೆಟ್ಟು ಮರೆಯಾದಳಾ
ಗೆಳತಿ….!!!!


ಖಾಲಿ ಕಾಗದ
ಖಾಲಿ ಕಾಗದೆದೆಯ ಮೇಲೆ
ರುಜು ಮಾಡಿ 
ಅವಳ ಕೈಗಿತ್ತೆ,
ಮರಳಿ ಓದಲು
    
ಅವಳೇನು ಬರೆದಿಲ್ಲ ನಿಜ,
ಆದರೊಂದು ಸಂಶಯ
ಬಿಳಿ ಕಾಗದದಲಿ 

ಗೀಚಿರ ಬಹುದೆ
ಬಿಳಿ ಶಾಯಿಯಿಂದ 
ಏನನ್ನಾದರು ಎಂದು..!!

ಇದಾವ ಮೋಹ
ಇದಾವ ಮೋಹ...                         
ಅವಳು ಎದುರು ಬಂದಾಗಲೆಲ್ಲ
ಲಜ್ಜೆ ಬಿಟ್ಟು ಮನಸು ತನ್ನ
ನೋವಿನ ಬಟ್ಟೆ 

ಕಳಚಿ ಬೆತ್ತಲಾಗಿ ನಿಲ್ಲುತ್ತೆ 
ಒಳಗಿನ ಅಳಲನು ಪ್ರದರ್ಶಿಸುತ್ತ.

ಸಂಬಂಧ
ಅಳಿದು ಹೋಗುತ್ತಿರುವ
ಮನುಜ ಸಂಬಂಧಗಳ
ಮೂರ್ತಿಯ ಮಾಡಿ
ಗುಡಿಯ ಕಟ್ಟಬೇಕು,
ದೇವರೆಂಬ ಭಯದಿ
ಕಠೋರ ಹೃದಯಗಳು
ತಲೆಬಾಗಿ ನಮಿಸ ಬಹುದು..!!


ಸಿ.ಎಸ್.ಮಠಪತಿ




1 comment:

  1. ಸುಂದರವಾದ ಚುಟುಕುಗಳು. ಆದರೆ ಯಾಕೋ ಸ್ವಲ್ಪ ನಿರಾಶೆಯ ಮೋಡ ಕವಿದಂತೆ ಅನ್ನಿಸುತ್ತಿದೆ. ಭಾವನೆಗಳಿಗೆ ಚೆನ್ನಾದ ಕವಿತ್ವದ ಉಡುಗೊರೆ ತೊಡೆಸಿದ್ದೀರಿ. ಆದರೆ ಋಣಾತ್ಮಕ ಭಾವನೆಗಳು ಹೆಚ್ಚಾಗಿ ಖುಷಿ ಕೊಡವು. "ತೊಪ್ಪಲು" ಎಂಬ ಪದದ ಉಪಯೋಗ ಹಿಡಿಸಿತು.

    ReplyDelete