Friday 21 December 2012

ಎದೆಯಾಳದ ಹನಿಗಳು ಭಾಗ-5


ನಿದ್ರೆ
ಸುಪ್ಪತ್ತಿಗೆಯ 
ಹಾಸಿಗೆಯನ್ನು
ಕೊಳ್ಳಬಹುದು ಆದರೆ
ಸುಖ ನಿದ್ರೆಯನ್ನಲ್ಲ..

ವಿಪರ್ಯಾಸ 
ಕಸಾಯಿಖಾನೆ ಮುಂದೆ
ಗೂಟಕ್ಕೆ ಕಟ್ಟಿಸಿಕೊಂಡು
ಹುಲ್ಲು ತಿನ್ನುವ
ಕುರಿಗೆ ತಾ ತಿಂದ ಹುಲ್ಲು
ಜೀರ್ಣವಾಗುವ ಮೊದಲೇ
ತಾನು ಇನ್ನೊಬ್ಬರ ಉದರದಲಿ
ಜೀರ್ಣವಾಗುತ್ತೇನೆ ಎನ್ನುವುದು
ತಿಳಿದಿರುವುದೇ ಇಲ್ಲ...

ಹೊನ್ನಾಡು
ನನ್ನೆಲ್ಲ ನೋವನ್ನು
ಬಸಿದು ಎಣ್ಣೆಯಾಗಿಸಿ
ಹಣತೆ ತುಂಬಿಸಿದ್ದೇನೆ.
ದೀಪ ಜಲಿಸಿ ನೋವು ಉರಿದು
ಬೆಳಕು ಬೀರಿದೊಡೆ
ಎನ್ನ ಬದುಕೆ
ಹೊಂಬೆಳಕಿನ ಹೊನ್ನಾಡು

ಕಲ್ಲು ಸಕ್ಕರೆ
ನನ್ನ ಪ್ರೀತಿಗೆ ಕಲ್ಲಾದ
ಅವಳು,
ಇನ್ನಾರದೋ ಪ್ರೀತಿಗೆ
ಕಲ್ಲು ಸಕ್ಕರೆ ಯಾದಳು..

ಜೀವನ
ಬೆತ್ತಲೆ ಹುಟ್ಟುವ ಶಿಶುವಿಗೆ
ಬಟ್ಟೆಯ ತೊಡಿಸಿ
ಬೆಳೆಸಿದರು,
ಬೆಳೆದು ಸತ್ತ ದೇಹದ
ಬಟ್ಟೆಯ ಕಳಚಿ ಸುಟ್ಟರು...

ಗಮನ
ನೀನು ತುಂಟ ತನದ
ಮಾತು ಹೇಳುವಾಗ
ನಿನ್ನ ಚೆಂದುಟಿಯ
ಚಲನವಲನಕ್ಕಷ್ಟೇ
ಸೀಮಿತ ನನ್ನ ಗಮನ.....

ನವತೀರ 
ಶಿಥಿಲಗೊಂಡ 
ಸಂಬಂಧದ
ಮನೆಯಲ್ಲಿ ಇದ್ದು 
ಇಲ್ಲದಂತಿರುವವರ
ಜೊತೆಯಲ್ಲಿ ಬದುಕುವದಕ್ಕಿಂತ;
ಕಾಲ್ಗಳಿಗೆ ಬುದ್ಧಿ ಹೇಳಿ ನವತೀರಕೆ ನೆಗೆದು
ಹೊಸ ಬಾಳು ಕಟ್ಟುವುದು ಒಳಿತು...

ಪಯಣ
ನನ್ನಿಂದ 
ದೂರಾದವರನ್ನು 
ತೊರೆದು
ದೂರ ನಡೆದು 
ಹೋಗಬೇಕೆಂದರೆ;
ಅವರ ನೆನಪೆಂಬ
ತೊಡರು
ಬಂದು ಎಲ್ಲಿಗೆ 
ಪಯಣ ಎಂದು ಕೇಳುತ್ತಿದೆ...

ಸದ್ದು
ಭಣಗುಡುವ ಬದುಕಿಗೆ
ಧುತ್ತೆಂದು ಬಂದು
ಜೋರು ಸದ್ದನು ಮಾಡಿ
ಇಲ್ಲಿ ಏನಿಲ್ಲವೆಂದರಿತೊಡೆ
ಸರ್ರೆಂದು ಹೊರಟು
ಹೋಗುವವರೇ ಹೆಚ್ಚು.

ನೃತ್ಯ ಪಟು 
ಜೀವನವೊಂದು 
ತಾತ್ಕಾಲಿಕ
ಸುಖ ವೈಭೋಗಕೆ
ಮನ ಸೋತು ,
ಮೈದುಂಬಿ
ನರ್ತಿಸುವ
ಜಾಣ ನೃತ್ಯ ಪಟು.

ಭಾವಚಿತ್ರ
ಅವಳ ಬರುವಿಕೆಯ
ಭರವಸೆಯ ನಿರೀಕ್ಷೆಯಲಿ
ಕಾದು ಬಸವಳಿದ
ಕಣ್ಣುಗಳಲ್ಲಿ ಈಗ ಉಳಿದದ್ದು
ಕೇವಲ ಅವಳ ಮಸಕು ಮಸಕು
ಭಾವಚಿತ್ರ..




ಬದುಕು
ಬದುಕು ಕಟ್ಟಿಕೊಳ್ಳಲು
ಇನ್ನು ಕಾಲ ಪಕ್ವವಾಗಿಲ್ಲ
ಎನ್ನುತ್ತಿದ್ದವನು
ನೋಡ ನೋಡತ್ತಿದ್ದಂತೆ
ವೃದ್ಧಾಪ್ಯದ ಬಾಗಿಲು ತಟ್ಟಿದ್ದ..

ಲೀನ                                      
ಅವರು ಹಾಗೆನ್ನುತ್ತಾರೆ
ಇವರು ಹೀಗೆನ್ನುತ್ತಾರೆ
ಎಂದು ತಲೆ ಕೆಡಿಸಿಕೊಂಡು
ಕುಳಿತಿದ್ದೆ;
ಅವಳು ಬಂದಳು,
ಹೂನಗೆ ಬೀರಿದಳು
ಎಲ್ಲರನು, ಎಲ್ಲವನು
ಮರೆತ ಮನ, ಸ್ಖಲಿಸಿ
ಹೂನಗುವಲಿ ಲೀನವಾಯ್ತು

ಸಂಗಾತಿ 
ನೂರು ವಸಂತಗಳ
ತುಂಬು ಜೀವನದಲಿ
ಅವನಿಗಾಗಿ ಅವನಜೊತೆ
ಇದ್ದದ್ದು ಕೇವಲ ಅವನ ಬಾಲ್ಯ..!!
ಆಮೇಲೆ ಜೀತದಾಳಾಗಿ ಹೋದ....
ಅನ್ಯರಿಗಾಗಿ ಬದುಕಿದ, ದುಡಿದ,
ಕೊನೆಗೆ ಎಲ್ಲ ಹಂಗನು ತೊರೆದು ಮಡಿದ.

ತೃಷೆ
ಎಲ್ಲ ಬಲ್ಲವನು ನಾನಲ್ಲ
ಬಲ್ಲ ವಿಷಯದ ಬಗ್ಗೆ
ಬೆಳಕು ಚೆಲ್ಲುವುದು
ಮರೆಯುವುದಿಲ್ಲ..

ಚಿರನಿದ್ರೆ
ಮುಂದೊಂದು ದಿನ 
ನಾ ತೀರಿದಾಗ
ನೀ ಬಂದು ಕಂಬನಿ 
ಮಿಡಿಯದಿದ್ದರೂ,
ನನ್ನೆದೆಯ ಮೇಲೆ 
ಎರಡು ಹಿಡಿ ಮಣ್ಣಾದರು
ಹಾಕು.........
ನಿನ್ನ ಸ್ಮರಣೆಯಲ್ಲಿಯೇ
ಕೊನೆ ಬಡಿತ
ನಿಲ್ಲಿಸುವ ನನ್ನ ಹೃದಯ
ನೆಮ್ಮದಿಯ ಚಿರನಿದ್ರೆಗೆ ಜಾರುವುದು.


ಸುಣ್ಣ
ಇರುಳುಗಪ್ಪಲಿ
ಬಡವನ ಮನೆಗೆ 
ಬಳಿದ ಸುಣ್ಣ
ಪಕ್ಕದ ಧನಿಕನ
ಮನೆಯ ಬಣ್ಣಕ್ಕಿಂತಲೂ 
ಹೊಳೆಯುತ್ತಿತ್ತು...

ನೆರಳು
ಬಿಸಿಲಲಿ ನಿಂತು
ನೆರಳಿಗಾಗಿ
ತಡಕಾಡುವಾಗ
ನನ್ನ ನೆರಳು
ನನ್ನನ್ನೇ ಮೂದಲಿಸಿತ್ತಿತ್ತು...

ವಿದಾಯ
ನಿನ್ನ ಪ್ರೀತಿಯಂತು
ಕೊಡಲಾಗಲಿಲ್ಲ
ನಿನಗೆಂದೇ
ಮುಡಿಪಾಗಿ
ಕಳೆದ ಕಾಲವನ್ನಾದರು
ಮರಳಿಕೊಡು;
ನಿನ್ನಿಂದ ನಾ ಶಾಶ್ವತವಾಗಿ
ದೂರಾಗಿ ಬಿಡುವೆ...

ಗೀತೆ
ಪ್ರತಿ 
ಕುತೂಹಲಕ್ಕೊಂದು
ಗೀತೆಯಬರೆದೊಡೆ,
ಬದುಕೊಂದು
ಮಹಾಕಾವ್ಯವಾಗಿ ಬಿಡುತ್ತದೆ.

ಎದೆವೀಣೆ
ನಾ ಬರೆವ ಗೀತೆಗೆ
ಕೊರಳಾಗು ನೀ;
ಸಂತಸವೊ ಸೂತಕವೊ
ರಾಗವನುಡಿಸುವೆ
ಎದೆವೀಣೆ ಮೀಟಿ,
ನೀಡುತ ಜಗದ
ಜನನ ಮರಣಗಳಿಗೆ
ನಗು ಸಾಂತ್ವನ ಭರವಸೆಯ..

ಮನ
ಆಡಂಬರಿಕ
ಬೇಕುಗಳಿಗೆ
ಕೈ ಚಾಚಿ
ಮನ,
ಹಾದರಕ್ಕಿಳಿದಿದೆ..

ನಂಬಿಕೆ
ಕೈ ಯಲ್ಲಿನ ಇವತ್ತಿನ
ಮೇಲಿನಕ್ಕಿಂತ
ಭವಿಷ್ಯದ ನಾಳಿನ ಮೇಲೆಯೇ
ಹೆಚ್ಚು ನಂಬಿಕೆ ನಮಗೆ..

ಮನಸು
ಪ್ರತಿ ಕ್ಷಣವು
ಮಿತ್ಯದ ಪ್ರಪಂಚದಿ
ವಿಹರಿಸಿದ
ಕಳ್ಳ ಮನಸಿಗೆ
ಸತ್ಯದ ಗೂಡಿನೆಡೆಗೆ
ಹೆಜ್ಜೆ ಹಾಕಲಾಗಲೇ ಇಲ್ಲ..

ಕಳ್ಳ ನೋಟ
ಎಷ್ಟು ದಿನ ಅಂತ
ಕದ್ದು ಮುಚ್ಚಿ
ಸವಿಯಲಿ
ಮುದ್ದು ನಲ್ಲೆ
ನಿನ್ನ ಚಂದವ.
ಇಂದಲ್ಲ ನಾಳೆ
ಮುದಿತನವು ಅಪ್ಪಿತೂ
ನಿನ್ನ, ಚೆಲುವಿಗಲ್ಲ; ನನ್ನ
ಕಳ್ಳ ನೋಟಕೆ

ನೀರವ ಮೌನ
ಗೆದ್ದೆ ಗೆಲ್ಲುವೆ ಎನ್ನುತ
ಬದುಕು ಕಾನನಕೆ
ಲಗ್ಗೆ ಇಟ್ಟವಳು,
ನೀರವ ಮೌನಕೆ
ಹೆದರಿ ಸೋಲಿಗೆ
ಶರಣಾದಳು..

ನಿನಾದ
ರಾತ್ರಿಯಲ್ಲಾ ಕುಳಿತು
ಬರೆವ ಸಾಲುಗಳಲಿ
ಬಣ್ಣ-ಬಣ್ಣದ 
ಅನುಭವದ ನಿನಾದ..

ಯಕ್ಷಪ್ರಶ್ನೆ
ಸೋಲೊಪ್ಪಿ 
ಸಾಯಬೇಕೆಂದಾಗಲೂ
ಬದುಕು ಕೇಳುತ್ತೆ ಸಹಸ್ರ
ಯಕ್ಷಪ್ರಶ್ನೆಗಳನು….

ಉಪಟಳ 
ಉತ್ತರಿಸಬೇಕೆಂದು 
ಗಟ್ಟಿಯಾಗಿ
ನಿಂತಾಗಲೆಲ್ಲ
ಮತ್ತವೇ ಪ್ರಶ್ನೆಗಳ
ಉಪಟಳ….

ದಾಹ 
ಜೀವ ಹೋಗುತ್ತಿತ್ತು
ಕತ್ತಿಗೆ ಹಗ್ಗವ
ಬಿಗಿದುಕೊಂಡು
ಯಾಕೋ 
ದಾಹ ಹೆಚ್ಚಾಗಿ ನೀರು
ಕುಡಿಯಬೇಕೆನಿಸಿತು….

ಲೀನ
ಅವರು ಹಾಗೆನ್ನುತ್ತಾರೆ
ಇವರು ಹೀಗೆನ್ನುತ್ತಾರೆ 
ಎಂದು ತಲೆ ಕೆಡಿಸಿಕೊಂಡು
ಕುಳಿತಿದ್ದೆ; 
ಅವಳು ಬಂದಳು, 
ಹೂನಗೆ ಬೀರಿದಳು
ಎಲ್ಲರನು, ಎಲ್ಲವನು 
ಮರೆತ ಮನ ಸ್ಖಲಿಸಿ
ಹೂನಗುವಲಿ ಲೀನವಾಯ್ತು…..

ದುಖಃ
ತಡಿಯಲಾರದಷ್ಟು ದುಖಃ
ಕತ್ತನು ಅಡರಿಯಾಗಿತ್ತು
ಅತ್ತು ಹೊರಹಾಕಬೇಕೆನ್ನುವಷ್ಟರಲಿ
ಧೋ ಎಂದು ಸುರಿವ ಮಳೆನೋಡಿ
ಕತ್ತಿನಲ್ಲೆ ಇಂಗಿ ಹೊಯ್ತು…

ಸೋಲು  
ಮುಂದೊಂದು ದಿನ
ರಾಜ ಕಿರಿಟ ತೊಡುವ
ರಾಜ ಕುಮಾರನಿಗೆ
ಅರಮನೆಯ ದಾಸಿಗೆ ಸೋತ
ಸೋಲು ಕಾಡುತ್ತಿತ್ತು..


ಸಿರಿತನ
ಸಿರಿತನದ
ಬೇತಾಳ ಬೆನ್ನಿಗೆ
ಕಟ್ಟಿಕೊಂಡು ಭಯದಿ
ಬದುಕುವದಕ್ಕಿಂತ,
ಬಡತನದ ಚಿತೆಗೆ
ಮೈ-ಮನ ಬೆಚ್ಚಗಿರಿಸಿಕೊಂಡು
ಬದುಕುವುದು ಲೇಸು...

ನಿವೇದನೆ
ಹತ್ತು ವರ್ಷ
ಹಿಂದಿನ ಆಸನದಲಿ
ಆಸೀನನಾಗಿ
ಆಶ್ವಾಧಿಸಿದೆ
ಅವಳ ಕೇಶ ಸೌಂದರ್ಯ.
ಕೊನೆಗೂ ಹೇಳಲಾಗಲಿಲ್ಲ
ಬಾಲ್ಯದಿಂದ ಬೆಳೆದ
ತುಂಬು ಹರೆಯದ ಪ್ರೀತಿಯನು
ಕಣ್ಣಲಿ ಕಣ್ಣಿಟ್ಟು ಮುಖವ ನೋಡಿ..

ಗಾಳಿಪಟ
ಪ್ರೀತಿಪರ್ವದಿ
ಗಾಳಿಪಟವಾಗಿ
ಆಗಸದಂಗಳದಲಿ
ಹಾರಾಡುತಿರೆ ಇಬ್ಬರು,
ಸೂತ್ರ-ದಾರವು
ಹರಿದು ಇಲ್ಲವಾಗಿರೆ
ಭುವಿಗೆ ಮರಳುವುದು ಹೇಗೆ..

ಜ್ವಾಲೆ 
ಭೋರ್ಗರೆಯುತಿವೆ
ಭಾವನೆಗಳು,
ಉರಿಯುತಿವೆ 
ಬೆಚ್ಚಗೆ ಬಚ್ಚಿಟ್ಟ
ನೆನಪುಗಳು
ಕಡುಗೆಂಪು
ಜ್ವಾಲೆಯಲೆಯಲಿ
ಒಂದು,
ಕೊಚ್ಚಿಹೋಗು
ಇಲ್ಲ, ಸುಟ್ಟು ಹೋಗು..

ಚುಂಬನ 
ಮೊದಲ
ಮುತ್ತಿಗೆ
ನಾಚಿ ಮಧುವಾಗಲು
ನಲ್ಲೆ,
ಮತ್ತೊಂದು
ಚುಂಬನ ನೀಡಿ
ಕಣ್ಣೆದುರಿಗೆ
ಖೈದಿಯಂತೆ ನಿಂತು ಬಿಟ್ಟೆ.

ಎಫ್. ಬಿ
ಯಾಕಪ್ಪ
ಇಷ್ಟು ಚೆಂದ ಬರೆಯುತ್ತಾರೆ
ಮಿತ್ರರು, ಬರೀ ಲೈಕ್ ಒತ್ತಿ
ಮುಂದೆ ಹೋಗೋಣ
ಅಂದ್ರೆ ಮನಸ್ಸೇ ಬರಲ್ಲ.
ನಿಂತು ಮತ್ತೊಮ್ಮೆ
ಮಗದೊಮ್ಮೆ ಓದಿ
ಕಾಮೆಂಟ್ ಹಾಕ ಬೇಕು ಅನಿಸುತ್ತೆ.

ಭಾವ 
ಅಚ್ಚು-ಮೆಚ್ಚಿನವರನ್ನು
ಕಳೆದುಕೊಳ್ಳುತ್ತಿದ್ದೇವೆ
ಎಂಬ,
ಭಾವ ತೀವ್ರತೆಯಲಿ
ನಮ್ಮನ್ನೇ
ಕಳೆದುಕೊಳ್ಳುವ
ನಾವು....

ಅದೃಶ್ಶ
ಹನಿ-ಚುಟುಕು
ಬರೆಯುವಾಗ
ಇಣುಕುವ
ಚೆಂದುಳ್ಳ ಚಲುವೆ
ಕಥೆ-ಕವನ
ಬರೆಯುವಾಗ
ಅದೃಶ್ಶವಾಗಿ ಬಿಟ್ತಾಳೆ.

ಸಿ.ಎಸ್.ಮಠಪತಿ

No comments:

Post a Comment